ಮುಂಗಾರು ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹ: ವಿರಾಜಪೇಟೆಯಲ್ಲಿ ಪೋಸ್ಟರ್ ಬಿಡುಗಡೆ, ಸಹಿ ಸಂಗ್ರಹ
ವಿರಾಜಪೇಟೆ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಜನಗಣತಿ ಹಾಗೂ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಯಿಂದ ಮಹಿಳಾ ಮೀಸಲಾತಿಯನ್ನು ಬೇರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಮಂಡಿಸಬೇಕು. ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆಯೇ ಮುಂದಿನ ಚುನಾವಣೆಯಿಂದ ಶೇ.33ರ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ವಿರಾಜಪೇಟೆಯಲ್ಲಿ ಪೋಸ್ಟರ್ ಬಿಡುಗಡೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಿತು.
ಮಂಗಳವಾರ ವಿರಾಜಪೇಟೆಯಲ್ಲಿ ಸಂಘಟನೆಯ ಕಛೇರಿಯಲ್ಲಿ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ ಮುಖಂಡರು, ಬಳಿಕ ಸಾರ್ವಜನಿಕರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಂದ ಸಹಿ ಸಂಗ್ರಹಿಸುವ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ರಾಜಕೀಯದಲ್ಲಿ ಮಹಿಳೆಯರ ಸಮಾನ ಪ್ರಾತಿನಿಧ್ಯ ಮತ್ತು %33 ಮೀಸಲಾತಿಯ ಅಗತ್ಯತೆಯನ್ನು ಸಾರುವ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಮುಂಬರುವ ಚುನಾವಣೆಗಳಿಂದಲೇ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಆಗ್ರಹಿಸಿದರು. ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಬಿರುಸಿನ ಸಹಿ ಸಂಗ್ರಹ ನಡೆಯಿತು. ಸಾವಿರಾರು ನಾಗರಿಕರು ಸಹಿ ಮಾಡುವ ಮೂಲಕ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮೀಸಲಾತಿಯನ್ನು ಕೇವಲ ಕಾಗದದ ಮೇಲೆ ಇಡದೇ, ಬರುವ ಮುಂದಿನ ಚುನಾವಣೆಗಳಿಂದಲೇ ಕ್ಷೇತ್ರಗಳ ಆಧಾರದಲ್ಲಿ ಜಾರಿಗೆ ತರಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಬಲವಾಗಿ ಆಗ್ರಹಿಸಿದರು. ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಅಥವಾ ಜನಗಣತಿಯ ನೆಪ ಹೇಳಿ ಮೀಸಲಾತಿ ಜಾರಿಯನ್ನು ವಿಳಂಬ ಮಾಡಬಾರದು ಎಂದು ಮುಖಂಡರು ಒತ್ತಾಯಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್,"ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಇಂದಿಗೂ ತುಂಬಾ ಕಡಿಮೆಯಿದೆ. ಮಹಿಳೆಯರ ಸಬಲೀಕರಣಕ್ಕಾಗಿ %33 ಮೀಸಲಾತಿಯನ್ನು ಮುಂದಿನ ಚುನಾವಣೆಯಿಂದಲೇ ಜಾರಿಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,"ಎಂದು ಎಚ್ಚರಿಸಿದರು.
ದೇಶದ ಸಂಸತ್ನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ 185 ರಾಷ್ಟçಗಳ ಪೈಕಿ ಭಾರತವು 151ನೇ ಸ್ಥಾನದಲ್ಲಿರುವುದು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಹಲವು ದಶಕಗಳಿಂದ ಭಾರತೀಯ ಮಹಿಳೆಯರು ತಮ್ಮ ನ್ಯಾಯಸಮ್ಮತ ರಾಜಕೀಯ ಅವಕಾಶ ಮತ್ತು ಅಧಿಕಾರದಿಂದ ವಂಚಿತರಾಗಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಈ ವ್ಯವಸ್ಥಿತ ಅನ್ಯಾಯಕ್ಕೆ ಈಗಲೇ ಅಂತ್ಯ ಹಾಡಬೇಕು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಅವರ ದಕ್ಷಿನ ರಾಜಕೀಯ ಪ್ರಾತಿನಿಧ್ಯ ಸಿಗಲೇ ಬೇಕು. ದೀರ್ಘ ಕಾಲದವರೆಗೆ, ಸಮಾನ ರಾಜಕೀಯ ಪ್ರತಿನಿಧಿತ್ವಕ್ಕಾಗಿ ಭಾರತದ ಮಹಿಳೆಯರು ಬಹಳ ದೀರ್ಘಕಾಲದಿಂದ ಕಾಯುತ್ತಿದ್ದಾರೆ.
ಈ ಐತಿಹಾಸಿಕ ಭರವಸೆಯನ್ನು ಕಾರ್ಯರೂಪಗೊಳಿಸಬೇಕು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಈಗಲೇ ಆಗಲೇಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜನವಾದಿ ಸಂಘಟನೆಯ ಸದಸ್ಯರಾದ ಪ್ರೇಮಾ, ಸೀತೆ, ಸುಮತಿ, ನಂದಿನಿ, ಬಿಂದು, ಮಂಗಳಾ ಸೇರಿದಂತೆ ಪದಾಧಿಕಾರಿಗಳು, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಎ.ಸಿ. ಸಾಬು, ಡಿವೈಎಫ್‌ಐ ಸಂಘಟನೆಯ ಮುಖಂಡರಾದ ಸಾಧಿಕ್, ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
