State News

ಕಡತಕ್ಕೆ 10 ಲಕ್ಷ ಡಿಮ್ಯಾಂಡ್: 5.50 ಲಕ್ಷ ಪಡೆಯುವಾಗಲೇ ಸಿಕ್ಕಿಬಿದ್ದ ಎಸಿ

admincoorgdaily

ಕಡತಕ್ಕೆ 10 ಲಕ್ಷ ಡಿಮ್ಯಾಂಡ್: 5.50 ಲಕ್ಷ ಪಡೆಯುವಾಗಲೇ ಸಿಕ್ಕಿಬಿದ್ದ ಎಸಿ

ಬೆಂಗಳೂರು: ಕಂದಾಯ ಮೇಲ್ಮನವಿ ಇತ್ಯರ್ಥಪಡಿಸುವ ನೆಪದಲ್ಲಿ 5.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಮೈಸೂರು ಜಿಲ್ಲೆ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರನ್ನು ಲೋಕಾಯುಕ್ತ ಪೊಲೀಸರು ನಿನ್ನೆ ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಘಟನೆಯ ವಿವರ: ಎಚ್.ಡಿ. ಕೋಟೆ ತಾಲೂಕಿನ ನಾಲ್ಕೂವರೆ ಎಕರೆ ಜಮೀನಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ನ್ಯಾಯಾಲಯದ ಆದೇಶವಿತ್ತು. ಈ ಕಡತ ವಿಲೇವಾರಿ ಮಾಡಿಕೊಡಲು ಎಸಿ ಕಾವ್ಯಾರಾಣಿ ಅವರು 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಬೆಂಗಳೂರು ಮೂಲದ ದೂರುದಾರೆ ಡಾ. ರೂಪಾ ಅವರು ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

 ನಿನ್ನೆ ಮಧ್ಯಾಹ್ನ ಊಟದ ವೇಳೆ ಎಸಿ ಕಾವ್ಯಾರಾಣಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದರು. ಯೋಜನೆಯಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ, ದೂರುದಾರೆ ಡಾ. ರೂಪಾ ಅವರಿಂದ ಎಸಿ ಕಚೇರಿಯ ಗುಮಾಸ್ತ ಶಿವಕುಮಾರ್ ಅವರಿಗೆ 5.50 ಲಕ್ಷ ರೂ. ಲಂಚದ ಹಣ ನೀಡಿಸಿತು. ಗುಮಾಸ್ತನಿಂದ ಹಣ ಪಡೆದು ನಿವಾಸದಲ್ಲಿದ್ದ ಎಸಿ ಕಾವ್ಯಾರಾಣಿ ಅವರು ಹಣ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ 3 ಜೀಪ್‌ಗಳಲ್ಲಿ ಬಂದಿದ್ದ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿತು.

ಲೋಕಾಯುಕ್ತ ಪೊಲೀಸರು ಹಣ ಸಮೇತ ಎಸಿ ಕಾವ್ಯಾರಾಣಿ ಮತ್ತು ಗುಮಾಸ್ತ ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಕಡತ ಇತ್ಯರ್ಥಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ಈ ಘಟನೆ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.