ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆ : ಪೊಲೀಸರ ಕ್ರಮಕ್ಕೆ ಸೋಮವಾರಪೇಟೆ ಬಿಜೆಪಿ ಅಸಮಾಧಾನ
ಮಡಿಕೇರಿ ಮೇ 6 : ಕೊಡಗು ಜಿಲ್ಲೆಯಲ್ಲಿ ಮಿತಿ ಮೀರಿರುವ ವನ್ಯಜೀವಿಗಳ ಉಪಟಳ ಹಾಗೂ ಸಿ ಮತ್ತು ಡಿ ಭೂಮಿಯ ಸಮಸ್ಯೆಯ ಕುರಿತು ಅರಣ್ಯ ಸಚಿವರ ಗಮನ ಸೆಳೆಯಲು ಗುಡ್ಡೆಹೊಸೂರು ವೃತ್ತದಲ್ಲಿ ನಿಂತಿದ್ದ ಬಿಜೆಪಿ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮ ಖಂಡನೀಯವೆಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ವನ್ಯಜೀವಿ ದಾಳಿ ಮತ್ತು ಭೂಮಿ ಸಮಸ್ಯೆ ಜನರ ನಿದ್ದೆಗೆಡಿಸಿದೆ. ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವನ್ಯಜೀವಿಗಳ ದಾಳಿಯಿಂದ ಅಮಾಯಕ ಮಾನವ ಜೀವಗಳು ಹಾಗೂ ಜಾನುವಾರುಗಳು ಬಲಿಯಾಗುತ್ತಿವೆ. ಪರಿಸ್ಥಿತಿ ಗಂಭೀರವಾಗಿದ್ದರೂ ಮತ್ತು ನಿರಂತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ. ಈ ಕಾರಣದಿಂದ ಅರಣ್ಯ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಜಿಲ್ಲೆಯನ್ನು ಕಾಡುತ್ತಿರುವ ಅರಣ್ಯ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಗುಡ್ಡೆಹೊಸೂರಿನಲ್ಲಿ ವಿವರಿಸುವ ಪ್ರಯತ್ನವನ್ನು ಸೋಮವಾರಪೇಟೆ ಬಿಜೆಪಿ ಮಾಡಿತ್ತು. ಆದರೆ ಸಚಿವರು ಆಗಮಿಸುವ ಮೊದಲೇ ಪೊಲೀಸರು ಬಿಜೆಪಿ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಮಡಿಕೇರಿಗೆ ಕರೆ ತಂದಿರುವುದು ಖಂಡನೀಯವೆಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಪೊಲೀಸರನ್ನು ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದ್ದು, ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ವಿರೋಧ ಪಕ್ಷವಾಗಿ ಸಮಸ್ಯೆಗಳನ್ನು ಮಂಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಜನಪರ ಕಾಳಜಿಯಿಂದ ಬಿಜೆಪಿ ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡ ಪೊಲೀಸರ ಕ್ರಮ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಮತ್ತು ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಯತ್ನವಾಗಿದೆ. ಇದು ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.
