Kodagu

ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಶಿಸ್ತು , ಅನ್ಯೋನ್ಯತೆ, ನಾಯಕತ್ವ ಗುಣ ಮುಖ್ಯ:ಅನೂಪ್ ಮಾದಪ್ಪ

admincoorgdaily

ಸಮಾಜಕ್ಕೆ  ಉತ್ತಮ ಪ್ರಜೆಯಾಗಲು ಶಿಸ್ತು , ಅನ್ಯೋನ್ಯತೆ, ನಾಯಕತ್ವ  ಗುಣ ಮುಖ್ಯ:ಅನೂಪ್ ಮಾದಪ್ಪ

ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತು ಹಾಗೂ ಸಾಮಾಜಿಕ ಜಾಲತಾಣಕ್ಕೆ ದಾಸರಾಗದೆ ನಿರ್ದಿಷ್ಟ ಗುರಿ ಹೊಂದಿ ಅದನ್ನು ಸಾದಿಸುವ ಕಡೆ ನಿರಂತರ ಪ್ರಯತ್ನ ಕಠಿಣ ಪರಿಶ್ರಮ ಪಡಬೇಕೆಂದು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅಭಿಪ್ರಾಯ ಪಟ್ಟರು.

 ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ 2026 -27 ನೇ ಶೈಕ್ಷಣಿಕ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,

ಪದವಿ ಹಂತದ ವಿದ್ಯಾರ್ಥಿ ಜೀವನವು ಅತ್ಯಂತ ಮುಖ್ಯ ಘಟವಾಗಿದ್ದು ಈ ಸಮಯದಲ್ಲಿ ಮುಂದಿನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬಹಳ ಮುಖ್ಯ ವಾಗಿದೆ. ಈ ಹಂತದಲ್ಲಿ ಕೆಲವರು ತಪ್ಪು ಹಾದಿ ತುಳಿದು ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಮುಂದಿನ ಜೀವನ ಹಾಳುಮಾಡಿಕೊಳ್ಳುದರೊಂದಿಗೆ ತಮ್ಮ ತಂದೆ, ತಾಯಿ ಹಾಗೂ ಶಿಕ್ಷಣ ಸಂಸ್ಥೆಯ ಹೆಸರನ್ನು ಹಾಳುಮಾಡುತ್ತಾರೆ. ಆದರಿಂದ ಯುವ ಸಮುದಾಯ ಮಾದಕ ವಸ್ತುಗಳಿಂದ ದೂರ ಉಳಿದು ನಿಮ್ಮ ಕನಸನ್ನು ಸಾಕಾರಗೊಳಿಸುವ ಕಡೆ ನಿರಂತವಾಗಿ ಸಾಗಿ. ಇದರೊಂದಿಗೆ ಸಂಚಾರಿ ನಿಯಮಗಳನ್ನು ಪಾಲಿಸಿ ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಿ .ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜಾಗೃತಿ ಅತಿ ಮುಖ್ಯವಾಗಿದ್ದು ಆಮಿಷಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಕನಸಿರ ಬೇಕು ಹಾಗೂ ಆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಿಸ್ತು ಬದ್ಧವಾದ ಉತ್ತಮ ಹವ್ಯಾಸ ರೂಢಿಸಿಕೊಳ್ಳುದು ಜೀವನ ಮುಖ್ಯ .

ಸಮಯದ ಸದ್ಬಳಕೆ ಮಹತ್ತರವಾಗಿದ್ದು ಸಮಯದೊಂದಿಗೆ ಮುಂದೆ ಸಾಗುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಪ್ರಾಮುಖ್ಯತೆ ಇದ್ದು ತಮಗೆ ಲಭಿಸಿದ ಅವಕಾಶವನ್ನು ಕಠಿಣ ಪರಿಶ್ರಮದ ಮೂಲಕ ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಿರ ಎಂಬುದು ಬಹಳ ಮುಖ್ಯ . ಪ್ರಸ್ತುತ ವಿದ್ಯಾರ್ಥಿ ಜೀವನ ನಿಮ್ಮ ಜೀವನದ ಅತಿ ಮುಖ್ಯಘಟ್ಟ ಆದರಿಂದ ಏನನ್ನಾದರೂ ಸಾದಿಸಬೇಕಾದರೆ ಈಗಲಿಂದ ಸರಿಯಾದ ಸಿದ್ದತೆ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಅನಗತ್ಯವಾಗಿ ಸಮಯವನ್ನು ವ್ಯರ್ಥ ಮಾಡದೆ ಶಿಸ್ತು ಬದ್ಧವಾಗಿ ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟು ಕಷ್ಟ ಪಟ್ಟರೆ ಮುಂದಿನ ಜೀವನದಲ್ಲಿ ಯಶಸ್ಸು ನಿಶ್ಚಿತವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಷನ್ ಸೊಸೈಟಿಯ ನಿರ್ದೇಶಕರಾದ ಪುಚ್ಚಿಮಾಡ ಟಿ.ಸುಬ್ಬಯ್ಯ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳ ಆದರ್ಶವನ್ನು ಪಾಲಿಸಿ ಆದರ್ಶಮಯ ಜೀವನ ನಡೆಸುವ ಚಿಂತನೆ ಹೊಂದಬೇಕು. ಹಿರಿಯರ ಹಿತವಚನಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ . ಗೆಲುವು ಮಾತ್ರ ನಮ್ಮ ಗುರಿಯಾಗಿರದೆ ಪ್ರತಿಯೊಂದರಲ್ಲು ಸಕ್ರಿಯವಾಗಿ ಪಾಲ್ಗೊಳ್ಳುವ ಗುಣ ಬೆಳೆಸಿಕೊಳ್ಳಿ. ಪ್ರಸ್ತುತ ಶೈಕ್ಷಣಿಕ ಸಾಲಿಗೆ ಆಯ್ಕೆಯಾದ ನಾಯಕರು ತಮ್ಮ ಕಿರಿಯ ಸ್ನೇಹಿತರಿಗೆ ಮಾದರಿಯಾಗುವಂತಹ ಒಳ್ಳೆಯ ಕೆಲಸ ಮಾಡಿ ಕಲೇಜಿಗೆ ನಿಮ್ಮ ಕೊಡುಗೆ ನೀಡಿ ಎಂದರು.

 ಕಳೆದ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ .ಜಿ. ವೀಣಾ , ಐಕ್ಯೂಎಸಿ ಸಂಯೋಜಕ ಎಲ್.ಆರ್ . ರಾಘವೇಂದ್ರ , ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಮುಖ್ಯಸ್ಥ ಸೋಮಣ್ಣ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪ್ರೊ. ಎಂ.ಕೆ. ಮೊಣ್ಣಪ್ಪ , ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ಪದ್ಮ, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಹಾಜರಿದ್ದರು.