ಪ್ರತಿಭಟನೆಯ ಹೆಸರಿನಲ್ಲಿ ದೇಶ ಹಾಗೂ ದೇಶದ ಪ್ರಧಾನಿಗೆ ಅಗೌರವ ತೋರುವುದು ಖಂಡನೀಯ : ಸೋಮವಾರಪೇಟೆ ಬಿಜೆಪಿ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ
ಮಡಿಕೇರಿ ಜು.25 : ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳನ್ನು ನಡೆಸುತ್ತಿರುವ ಸಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ದೇಶ ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಅಗೌರವ ತೋರುತ್ತಿರುವುದು ಖಂಡನೀಯವೆಂದು ಸೋಮವಾರಪೇಟೆ ಬಿಜೆಪಿ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿರುವ ಸಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಪ್ರತಿಭಟನೆಯ ಸಂದರ್ಭ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುವ ಮತ್ತು ಪೋಸ್ಟರ್ ಗಳನ್ನು ಪ್ರದರ್ಶಿಸುವ ಮೂಲಕ ದೇಶ ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಅಗೌರವ ತೋರಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ದೇಶವ್ಯಾಪಿ ಸಿಜೆಪಿ ಮತ್ತು ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಹಾದಿ ತಪ್ಪುತ್ತಿದೆ. ವಿದ್ಯಾರ್ಥಿಗಳಲ್ಲದವರು ಪ್ರತಿಭಟನೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನೈಜ ವಿದ್ಯಾರ್ಥಿಗಳ ಮನೋಬಲಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಕಾನೂನಿಗೆ ವಿರುದ್ಧವಾದ ವರ್ತನೆಗಳು ಪ್ರತಿಭಟನೆಯ ಸಂದರ್ಭ ಕಂಡು ಬಂದಿದೆ. ವಿರಾಜಪೇಟೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ಷೇಪಾರ್ಹ ಬರಹಗಳನ್ನು ಪ್ರದರ್ಶಿಸಿ ಪ್ರಧಾನಮಂತ್ರಿಗಳಿಗೆ ಅಗೌರವ ತೋರಲಾಗಿದೆ.
ಮುಖ್ಯಮಂತ್ರಿಗಳಿಗೇ ಕಾನೂನು ಸಲಹೆಗಾರರಾಗಿದ್ದ, ಕಾನೂನು ಪಂಡಿತರೂ ಆಗಿರುವ ಶಾಸಕರ ಸಮ್ಮುಖದಲ್ಲೇ ಈ ರೀತಿಯ ಕಾನೂನು ಬಾಹಿರ ಪೋಸ್ಟರ್ ಗಳ ಪ್ರದರ್ಶನವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ದೇಶದ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ, ಆದರೆ ಅದು ನ್ಯಾಯ ಸಮ್ಮತವಾಗಿರಬೇಕೆ ಹೊರತು ವೈಯುಕ್ತಿಕ ನಿಂದನೆಗೆ ಸೀಮಿತವಾಗಬಾರದು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿಗಳನ್ನೇ ಗುರಿ ಮಾಡಿ ನಿಂದಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಮೂಡ ಹಗರಣ ಸೇರಿದಂತೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಬಿಜೆಪಿ ಈ ಹಿಂದೆ ಪ್ರತಿಭಟನೆಗಳನ್ನು ನಡೆಸಿದೆ. ಆದರೆ ಎಲ್ಲೂ ವೈಯುಕ್ತಿಕ ನಿಂದನೆ ಅಥವಾ ಆಕ್ಷೇಪಾರ್ಹ ಮಾತುಗಳನ್ನಾಡಿಲ್ಲ. ದೇಶ ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಅಗೌರವ ತೋರುವ ಸಿಜೆಪಿ ಮತ್ತು ಕಾಂಗ್ರೆಸ್ ವರ್ತನೆ ಹೀಗೆ ಮುಂದುವರೆದರೆ ಬಿಜೆಪಿ ತೀವ್ರ ಸ್ವರೂಪದ ಹೋರಾಟವನ್ನು ರೂಪಿಸಲಿದೆ ಎಂದು ಕಂಠಿ ಕಾರ್ಯಪ್ಪ ಎಚ್ಚರಿಕೆ ನೀಡಿದ್ದಾರೆ.
ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಪ್ರಧಾನಮಂತ್ರಿಗಳನ್ನು ಅವಮಾನಿಸಿದ ಪೋಸ್ಟರ್ ಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಬಂಧನ ಖಂಡನೀಯ:
ಬಿಡದಿ ಟೌನ್ ಶಿಪ್ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಕೊಡಗು ಜಿಲ್ಲೆಯಿಂದ ಹೊರಟಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿಯಾಗಿದೆ, ಜಿಲ್ಲೆಯಲ್ಲಿ ಶಾಂತಿಯುತ ಹೋರಾಟಕ್ಕೆ ಮುಂದಾಗಿದ್ದ ರೈತರ ಮೇಲೆ ಪೊಲೀಸ್ ಬಲ ಪ್ರಯೋಗ ಮಾಡಲಾಗಿದೆ. ರೈತ ಮುಖಂಡರೇ ಹೇಳಿರುವಂತೆ ಮುಂದಿನ ದಿನಗಳಲ್ಲಿ ರೈತರು ಮಾತ್ರವಲ್ಲ, ಜಿಲ್ಲೆಯ ಜನರು ಕೂಡ ಶಾಸಕರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಭಾರೀ ಕಾಳಜಿ ಇರುವಂತೆ ಪ್ರತಿಬಿಂಬಿಸಿಕೊಳ್ಳುತ್ತಿರುವ ಶಾಸಕರುಗಳು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಕೊಡಗಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ತಮ್ಮದೇ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಆ ಮೂಲಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಜಿಲ್ಲೆಯ ವಿದ್ಯಾರ್ಥಿಗಳ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂದು ಸವಾಲೊಡ್ಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
