ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಹಲವು ಕಾರ್ಯಕ್ರಮ: 34 ಕಡೆ ದಾಳಿ, 360 ಪ್ರಕರಣ ದಾಖಲು

Jul 30, 2026 - 17:37
 0  144
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಹಲವು ಕಾರ್ಯಕ್ರಮ:  34 ಕಡೆ ದಾಳಿ, 360 ಪ್ರಕರಣ ದಾಖಲು

ಮಡಿಕೇರಿ:-ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಡಿಕೇರಿ, ಕೊಡಗು ಜಿಲ್ಲೆ ವತಿಯಿಂದ ಪ್ರತೀ ವರ್ಷವು ವಿದ್ಯಾರ್ಥಿಗಳಲ್ಲಿ ತಂಬಾಕಿನ ಉತ್ಪನ್ನಗಳ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯಿದೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ಮತ್ತು ಶಾಲಾ ಅರಿವು ಕಾರ್ಯಕ್ರಮಗಳು, ಕೋಟ್ಪಾ ತನಿಖಾ ದಾಳಿಗಳು, ಬೀದಿನಾಟಕ, ವಿಶ್ವ ತಂಬಾಕು ರಹಿತ ದಿನಾಚರಣೆ, ತಂಬಾಕು ಮುಕ್ತ ಯುವ ಅಭಿಯಾನ, ಗುಂಪು ಚರ್ಚೆ, ಆಪ್ತ ಸಮಾಲೋಚನೆ, ಇನ್ನಿತರ ಐಇಸಿ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಾರವು ಜಿಲ್ಲೆಯಾದ್ಯಾಂತ ನಡೆಯುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

2026-27ನೇ ಸಾಲಿನಲ್ಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೋಟ್ಪಾ ತನಿಖಾ ದಾಳಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವ ಯಾವುದೇ ವ್ಯಕ್ತಿಗೆ ಪ್ರತಿ ಉಲ್ಲಂಘನೆಗೆ ರೂ 1000 ರ ವರೆಗೆ ಸೆಕ್ಷನ್ 21 ರ ಪ್ರಕಾರ ಪ್ರಾಧಿಕೃತ ಅಧಿಕಾರಿಗಳು ಸ್ಥಳದಲ್ಲೇ ದಂಡವನ್ನು ವಿಧಿಸಬಹುದು ಅಥವಾ ದಂಡ ಕಟ್ಟಲು ನಿರಾಕರಿಸಿದಲ್ಲಿ ಕೋರ್ಟ್ ಮುಂದೆ ಹಾಜರಾಗುವಂತೆ ಚಲನ್ ನೀಡಬಹುದಾಗಿದೆ. 

2026 ನೇ ಏಪ್ರಿಲ್–ಜೂನ್ ವರೆಗೆ 34 ದಾಳಿಗಳನ್ನು ನಡೆಸಿ 360 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿ ಅರಿವು ಮೂಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸೆಕ್ಷನ್-5:-ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆಯ ಮೇಲೆ ನಿಷೇಧ ಉಲ್ಲಂಘನೆಯಾದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ಕುರಿತು ಅರಿವು ಮೂಡಿಸಲಾಗಿದೆ.

ಸೆಕ್ಷನ್-6:-ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ (21 ವರ್ಷ ದೊಳಗಿನ ಮಕ್ಕಳು) ಮಾರಾಟ ಮಾಡಿಸುವುದರ ಮೇಲಿನ ನಿಷೇಧದ ಕುರಿತು ಅರಿವು ಮೂಡಿಸಲಾಗಿದೆ.

ಸೆಕ್ಷನ್ 6(ಬಿ):-ಶಿಕ್ಷಣ ಸಂಸ್ಥೆಗಳ 100 ಗಜ/ ಯಾರ್ಡ್ ಅಂತರದ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಮ್ಮ ಶಿಕ್ಷಣ ಸಂಸ್ಥೆಯನ್ನು ಸಂಪೂರ್ಣವಾಗಿ ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಕಾಯಿದೆ ಅಡಿಯಲ್ಲಿ ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ರೂ 1 ಸಾವಿರ ವರೆಗೆ ದಂಡವನ್ನು ಶಾಲಾ ಮುಖ್ಯೋಪಾಧ್ಯಾಯರು ಅಥವಾ ಸಂಬಂಧಪಟ್ಟ ಹತ್ತಿರದ ಪೋಲಿಸ್ ಠಾಣೆಯವರು ವಿಧಿಸಬಹುದಾಗಿರುತ್ತದೆ. ಏಪ್ರಿಲ್–ಜೂನ್ ವರೆಗೆ 34 ದಾಳಿಗಳನ್ನು ನಡೆಸಿ 7 ಪ್ರಕರಣಗಳನ್ನು ದಾಖಲಿಸಿ ಹಾಗೂ ಅರಿವು ಮೂಡಿಸಲಾಗಿದೆ. 

ಸೆಕ್ಷನ್ 6(ಸಿ):-ಈ ಕಾಯಿದೆ ಅಡಿಯಲ್ಲಿ ಬಿಡಿ ಬಿಡಿಯಾಗಿ ಸಿಗರೇಟು ಮಾರಾಟ ಮಾಡುವಂತಿಲ್ಲ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುವುದೆಂದು ಅರಿವು ಮೂಡಿಸಲಾಗಿದೆ. 

ಸೆಕ್ಷನ್-7:-ಪ್ರತಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕುಗಳ ಮೇಲೆ ಶೇ.85 ನಷ್ಟು ಆರೋಗ್ಯದ ಎಚ್ಚರಿಕೆ ಸಂದೇಶಗಳಿಲ್ಲದೆ ಮಾರಾಟ ಮಾಡುವುದರ ಮೇಲೆ ನಿಷೇಧ. ಉಲ್ಲಂಘನೆಯಾದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ಕುರಿತು ಅರಿವು ಮೂಡಿಸಲಾಗುತ್ತಿದೆ. 

ಶಾಲಾ/ ಕಾಲೇಜು ಅರಿವು ಕಾರ್ಯಕ್ರಮ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 48 ಶಾಲೆ ಹಾಗೂ ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ, 

ಶಾಲಾ/ ಕಾಲೇಜು ತಂಬಾಕು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿ ಪ್ರತಿ 6 ತಿಂಗಳಿಗೊಮ್ಮೆ ಸಭೆ ಮಾಡಿ ತಂಬಾಕು ದುಷ್ಪರಿಣಾಮದ ಕುರಿತು ಅರಿವು ಮೂಡಿಸುವಂತೆ ತಿಳಿಸಲಾಗಿದೆ. 

ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲಿ ಈ ತಂತ್ರಾಂಶದಲ್ಲಿ ನಮೂದಿಸಿ, ತಮ್ಮ ಸಂಸ್ಥೆಯನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯೆಂದು ಘೋಷಣೆ ಮಾಡುವಂತೆ ತಿಳಿಸಲಾಗಿದೆ.  

ವಿದ್ಯಾರ್ಥಿಗಳಿಗೆ ಚಿತ್ರಕಲಾ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಂಡು ಪ್ರಶಸ್ತಿ ವಿತರಿಸಲಾಗುವುದು. ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗುತ್ತದೆ. 

ತಂಬಾಕು ವ್ಯಸನ ಮುಕ್ತ ಕೇಂದ್ರ: 2026ನೇ ಏಪ್ರಿಲ್-ಜೂನ್ ವರೆಗೆ 2519 ಜನರಿಗೆ ಸ್ಕ್ರೀನಿಂಗ್, 1885 ರೋಗಿಗಳಿಗೆ ಆಪ್ತ ಸಮಾಲೋಚನೆ ನಡೆಸಿ 2170 ನಿಕೋಟಿನ್ ಗಮ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1