ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಒಳಾಂಗಣ ಕ್ರೀಡಾಕೂಟ, ಕೊಡಗು ಪ್ರೆಸ್ ಕ್ಲಬ್ ಡೇ ಪ್ರಯುಕ್ತ ನಡೆದ ಪಂದ್ಯಾವಳಿ; ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು ಭಾಗಿ

ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಒಳಾಂಗಣ ಕ್ರೀಡಾಕೂಟ, ಕೊಡಗು ಪ್ರೆಸ್ ಕ್ಲಬ್ ಡೇ ಪ್ರಯುಕ್ತ ನಡೆದ ಪಂದ್ಯಾವಳಿ; ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು ಭಾಗಿ

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಒಳಾಂಗಣ ಕ್ರೀಡಾಕೂಟ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕ್ರೀಡಾಕೂಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕ್ರೀಡಾಕೂಟದೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪತ್ರಕರ್ತರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗಲಿದೆ. ಮಹಿಳೆಯರಿಗೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಇದೇ ಜೂ.೭ರಂದು ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರ ಅಂಗವಾಗಿ ಇಂದು ಸದಸ್ಯರಿಗೆ ಒಳಾಂಗಣ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡೆಯನ್ನು ಆಯೋಜಿಸಲು ಸಾಕಷ್ಟು ಶ್ರಮವಹಿಸಬೇಕಿದೆ. ಆದ್ದರಿಂದ ಹೆಚ್ಚಿನ ಸದಸ್ಯರು ಪಾಲ್ಗೊಳ್ಳುವಂತಾಗಬೇಕು ಎಂದರು.

ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಂಜು ಸುವರ್ಣ, ಕ್ರೀಡಾಕೂಟ ಸಂಚಾಲಕ ಮನೋಜ್ ಮಾತನಾಡಿದರು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆದರ್ಶ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಕ್ರೀಡಾಕೂಟ ಸಂಚಾಲಕ ಲೋಹಿತ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್, ಕ್ರೀಡಾ ಸಂಚಾಲಕ ಸಂತೋಷ್ ರೈ ಇತರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಕೇರಂ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಸಂತೋಷ್ ರೈ, ಕೆ.ಎಂ.ವಿನೋದ್ ಜೋಡಿ ಪ್ರಥಮ, ನವೀನ್ ಡಿಸೋಜ-ಮನೋಜ್ ಜೋಡಿ ದ್ವಿತೀಯ ಸ್ಥಾನಗಳಿಸಿದರು. ಕೇರಂ ಸಿಂಗಲ್‌ನಲ್ಲಿ ಜಯಪ್ರಕಾಶ್ ಪ್ರಥಮ, ನವೀನ್ ಡಿಸೋಜ ದ್ವಿತೀಯ ಸ್ಥಾನ ಗಳಿಸಿದರು. ಚೆಸ್‌ನಲ್ಲಿ ರಿಜ್ವಾನ್ ಪ್ರಥಮ, ವರುಣ್ ದ್ವಿತೀಯ ಸ್ಥಾನ ಗಳಿಸಿದರು. ಕೇರಂ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಸವಿತಾ ರೈ-ವಿಶ್ಮ ಪ್ರಥಮ, ವತ್ಸಲ-ಶೈನಿ ದ್ವಿತೀಯ ಸ್ಥಾನಗಳಿಸಿದರು. ಸಿಂಗಲ್ಸ್‌ನಲ್ಲಿ ಸವಿತಾ ರೈ ಪ್ರಥಮ, ವಿಶ್ಮಾ ಪೆಮ್ಮಯ್ಯ ದ್ವಿತೀಯ ಸ್ಥಾನ ಗಳಿಸಿದರು.

ಪುರುಷರ ವಿಭಾಗದ ಟಿಟಿ ಡಬಲ್ಸ್‌ನಲ್ಲಿ ಲೋಹಿತ್-ಗೋಪಾಲ್ ಸೋಮಯ್ಯ ಪ್ರಥಮ, ಸಂತೋಷ್ ರೈ-ಕೆ.ಎಂ.ವಿನೋದ್ ದ್ವಿತೀಯ ಸ್ಥಾನ ಗಳಿಸಿದರು. ಸಿಂಗಲ್ಸ್‌ನಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಆದರ್ಶ್ ಅದ್ಕಲೇಗಾರ್ ದ್ವಿತೀಯ ಸ್ಥಾನಗಳಿಸಿದರು. ಟಿಟಿ ಮಹಿಳೆಯರ ವಿಭಾಗದಲ್ಲಿ ಸವಿತಾ ರೈ ಪ್ರಥಮ, ವಿಶ್ಮಾ ಪೆಮ್ಮಯ್ಯ ದ್ವಿತೀಯ ಸ್ಥಾನಗಳಿಸಿದರು. ಡಬಲ್ಸ್‌ನಲ್ಲಿ ಸವಿತ ರೈ-ವಿಶ್ಮಾ ಪೆಮ್ಮಯ್ಯ ಪ್ರಥಮ, ವತ್ಸಲ-ಶೈನಿ ದ್ವಿತೀಯ ಸ್ಥಾನ ಗಳಿಸಿದರು. ಮೈಂಡ್ ಗೇಮ್‌ನಲ್ಲಿ ಕಾಯಪಂಡ ಶಶಿ ಸೋಮಯ್ಯ ಪ್ರಥಮ ಸ್ಥಾನ ಪಡೆದರೆ, ಮಂಜು ಸುವರ್ಣ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ಜೂ.೭ರಂದು ನಡೆಯುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕ್ರೀಡಾಕೂಟ ಸಂಚಾಲಕ ಮನೋಜ್ ತಿಳಿಸಿದರು.