ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ; ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ ಸಾಧ್ಯತೆ ರಸ್ತೆ ಸೇರಿದಂತೆ ಹಲವು ಕಾಮಗಾರಿ ಪೂರ್ಣಗೊಳಿಸಿ: ಭೋಸರಾಜು
ಮಡಿಕೇರಿ ಮೇ.05:-ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಾದ್ಯಂತ ಲೋಕೋಪಯೋಗಿ, ಪಂಚಾಯತ್ ರಾಜ್ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಈ ಕುರಿತು ಮಾತನಾಡಿದ ಶಾಸಕರಾದ ಡಾ.ಮಂತರ್‍ಗೌಡ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಐಗೂರು ಸೇತುವೆ ಶೀಘ್ರ ನಿರ್ಮಾಣ ಮಾಡಬೇಕು. ಗಾಳಿಬೀಡು ರಸ್ತೆ ಸರಿಪಡಿಸಬೇಕು. ಹಾಗೆಯೇ ಮುಟ್ಲು, ಹಮ್ಮಿಯಾಲ, ದೇವಸ್ತೂರು, ಹಂಚಿನಾಡು ಮತ್ತಿತರ ರಸ್ತೆಯನ್ನು ನಿರ್ವಹಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ವರದಿ ನೀಡುವಂತೆ ಸೂಚಿಸಿದರು.
ರಾಜ್ಯದಲ್ಲಿ ರಸ್ತೆ ನಿರ್ವಹಣೆಗಾಗಿ ಸರ್ಕಾರ ನೂರಾರು ಕೋಟಿ ರೂ. ನೀಡಿದೆ. ಆದರೆ ಎಂಜಿನಿಯರ್‍ಗಳು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದು ಸರಿಯಲ್ಲ. ಸರ್ಕಾರ ಅಭಿವೃದ್ಧಿಗಾಗಿ ಹಣ ನೀಡಿದರೂ ಸಹ ಬಳಸದಿರುವುದು ಬೇಸರ ತರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್.ಅರುಣ್ ಮಾಚಯ್ಯ ಅವರು ಕರಿಕೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಕಾಮಗಾರಿ ಬಾಕಿ ಇದ್ದು, ಕಾಮಗಾರಿ ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಬಿಟ್ಟಂಗಾಲ, ತಿತಿಮತಿ, ಬಾಳುಗೋಡು ಸೇರಿದಂತೆ ಹಲವು ರಸ್ತೆ ಸರಿಪಡಿಸಬೇಕು ಎಂದು ಹೇಳಿದರು.
ಸಮಿತಿ ಸದಸ್ಯರಾದ ಅಬ್ದುಲ್ ರೆಹಮಾನ್ ಅವರು ನಾಪೋಕ್ಲು ಕ್ರೀಡಾ ಮೈದಾನದಲ್ಲಿ ಮಳೆಗಾಲದ ಅವಧಿಯಲ್ಲಿ ಮಕ್ಕಳು ಓಡಾಡಲು ತೊಂದರೆಯಾಗಲಿದೆ. ಆದ್ದರಿಂದ ಮಕ್ಕಳ ಓಡಾಟಕ್ಕೆ ಅನುಕೂಲ ಮಾಡಬೇಕು ಎಂದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಟ್ಟಡಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಶಾಸಕರು ಪ್ರಾದೇಶಿಕ ವಿಜ್ಞಾನ ಕೇಂದ್ರ ಜನವರಿ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಹಾಗೆಯೇ ಮಡಿಕೇರಿ ಮತ್ತು ಕುಶಾಲನಗರ ಕಲಾಭವನ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗೆಯೇ ಕುಶಾಲನಗರ ನ್ಯಾಯಾಲಯ ಕಟ್ಟಡ ಪ್ರಗತಿ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ ಅವರು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಕೊಠಡಿ ಶುಚಿತ್ವವಾಗಿಲ್ಲ. ಸರಿಯಾದ ನಿರ್ವಹಣೆ ಆಗಬೇಕು ಎಂದು ಸಲಹೆ ಮಾಡಿದರು.
ಸೆಸ್ಕ್ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಎರಡು ವಿಧಾನಸಭಾ ಕ್ಷೇತ್ರಕ್ಕೆ ತಲಾ 110 ಕೋಟಿ ರೂ.ವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಆ ನಿಟ್ಟಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯರ ಸಲಹೆ ಮಾರ್ಗದರ್ಶನ ಪಡೆದು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಇಇ ರಾಮಚಂದ್ರ ಅವರು 70 ಮಂದಿ ಗ್ಯಾಂಗ್‍ಮೆನ್‍ಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯುಂಟಾಗದಂತೆ ಗಮನಹರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಕೊಡಗು ಸೆಸ್ಕ್ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆ ಎಷ್ಟು ಎಂಬ ಬಗ್ಗೆ ಮನವರಿಕೆ ಮಾಡಬೇಕಿದೆ ಎಂದರು.
ಹುದಿಕೇರಿಯಲ್ಲಿ ಕೆಪಿಟಿಸಿಎಲ್ ಕಾಮಗಾರಿ ಪ್ರಗತಿಯಲ್ಲಿದೆ. ಬಾಳೆಲೆಯಲ್ಲಿ ಕೆಲಸ ಆರಂಭವಾಗಿದೆ. ಕಳತ್ಮಾಡು, ಸಿದ್ದಾಪುರ ಹಾಗೂ ಕಾಟಕೇರಿಯಲ್ಲಿ ಉಪ ವಿದ್ಯುತ್ ಘಟಕ ಆರಂಭಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ ವಿದ್ಯುತ್ ಉಪ ಕೇಂದ್ರಗಳ ಸಂಬಂಧ ಕಳೆದ ಒಂದು ವರ್ಷದಿಂದ ಚರ್ಚಿಸಿಕೊಂಡು ಬರಲಾಗಿದೆ. ಆದರೂ ಪ್ರಗತಿಯಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಶಾಸಕರಾದ ಡಾ.ಮಂತರ್‍ಗೌಡ ಅವರು ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ನಿರ್ವಹಿಸಬೇಕು. ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಜಲಜೀವನ್ ಮಿಷನ್ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಶೇ.50 ರಷ್ಟು ಕಾಮಗಾರಿ ತೃಪ್ತಿದಾಯಕವಾಗಿಲ್ಲ. ನೀರಿನ ಸಂಪನ್ಮೂಲ ಪಡೆಯುವ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್‍ಗೌಡ ಅವರು 450 ಕೋಟಿ ರೂ. ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ತಲುಪಿದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಸಲಹೆ ಮಾಡಿದರು.
ಆಹಾರ ಇಲಾಖೆಯಿಂದ ಅನ್ನಭಾಗ್ಯ ಹಾಗೂ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಬಿಪಿಎಲ್ ಕಾರ್ಡ್‍ನ್ನು ಎಪಿಎಲ್ ಮಾಡಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಬಡವರು ತೊಂದರೆಗೆ ಸಿಲುಕಬೇಕಿದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಗೃಹ ಹಾಗೂ ವಾಣಿಜ್ಯ ಬಳಕೆ ಅಡುಗೆ ಅನಿಲ ಪೂರೈಕೆ ಮತ್ತಿತರ ಸಂಬಂಧ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಅಡುಗೆ ಅನಿಲ ಹಾಗೂ ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದರು.
ಬಿಪಿಎಲ್ ಕಾರ್ಡ್‍ಗಳನ್ನು ಎಪಿಎಲ್ ಮಾಡಲಾಗಿದ್ದು, ಇದರಿಂದ ಬಡವರಿಗೆ ತೊಂದರೆಯಾಗಲಿದೆ ಎಂದು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಗಮನ ಸೆಳೆದರು.
ಬಿಪಿಎಲ್ ಕಾರ್ಡ್ ಇದ್ದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಅದನ್ನು ಬಿಟ್ಟು ಎಪಿಎಲ್ ಮಾಡಿರುವುದು ಸರಿಯಲ್ಲ ಎಂದು ಅವರು ಸಿಟ್ಟಾದರು.
ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ.ಭೀಮರಾಯ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 8,670 ಎಎವೈ, 97,046 ಬಿಪಿಎಲ್ ಚೀಟಿ ಹಾಗೂ 42,260 ಎಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್‍ಲೈನ್ ಮೂಲಕ 8,459 ಅರ್ಜಿಗಳು ಸಲ್ಲಿಕೆಯಾಗಿದ್ದು, 7,350 ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. 782 ಅರ್ಜಿಗಳು ತಿರಸ್ಕøತಗೊಂಡಿದ್ದು, 327 ಅರ್ಜಿಗಳು ಬಾಕಿ ಇದೆ ಎಂದು ವಿವರಿಸಿದರು.
ರಸಗೊಬ್ಬರ ಪೂರೈಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕೃಷಿಕರಿಗೆ ಬೇಕಿರುವ ರಸಗೊಬ್ಬರವನ್ನು ಸರಿಯಾಗಿ ಪೂರೈಸಬೇಕು. ದೂರು ಬರದಂತೆ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ರಸಗೊಬ್ಬರ ಚೀಲದ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆ ಈ ಸಂಬಂಧ ರ್ಯಾಂಡಮ್ ಆಗಿ ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.
ಈ ಸಂಬಂಧ ಕೃಷಿ ಸಚಿವರ ಜೊತೆ ಚರ್ಚಿಸಲಾಗುವುದು, ರಾಜ್ಯದ ವಿವಿಧ ಭಾಗದಲ್ಲಿ ಕಂಡು ಬರದ ಸಮಸ್ಯೆ ಜಿಲ್ಲೆಯಲ್ಲಿ ಯಾಕೆ ರಸಗೊಬ್ಬರ ತೂಕದಲ್ಲಿ ವ್ಯತ್ಯಾಸ ಆಗುತ್ತಿರುವ ಬಗ್ಗೆ ಪರಿಶೀಲಿಸಬೇಕಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಹಾಯಕ ಕೃಷಿ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಈ ಕುರಿತು ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಯೂರಿಯಾ, ಡಿಐಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‍ಎಸ್‍ಪಿ ಸೇರಿದಂತೆ ಎಲ್ಲಾ ರೀತಿಯ ರಸಗೊಬ್ಬರವನ್ನು ತರಿಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,453 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಇದುವರೆಗೆ 40,971 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇದರಲ್ಲಿ 2,189 ರಸಗೊಬ್ಬರ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ರಸಗೊಬ್ಬರ ಚೀಲದಲ್ಲಿ ತೂಕದ ವ್ಯತ್ಯಾಸ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರ ಗಮನಕ್ಕೆ ತಂದರು.
ರೈತರ ಹಿತಾಸಕ್ತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ರಸಗೊಬ್ಬರ ಚೀಲದ ತೂಕದಲ್ಲಿ ವ್ಯತ್ಯಾಸ ಉಂಟಾಗದಂತೆ ಗಮನಹರಿಸಬೇಕು ಎಂದರು.
ನೆರೆ ರಾಜ್ಯಗಳಿಗೆ ರಸಗೊಬ್ಬರ ಅಕ್ರಮ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಸಂಬಂಧ ಪಟ್ಟ ಇಲಾಖೆಗಳು ಎಚ್ಚರವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು.
ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಗಮನಹರಿಸಬೇಕು ಎಂದು ಸಚಿವರು ಹೇಳಿದರು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಮೂಲ ಸೌಲಭ್ಯಕ್ಕೆ ಒತ್ತು ನೀಡುಂತೆ ಸಚಿವರು ಸೂಚಿಸಿದರು. ಹೋಂ ಸ್ಟೇ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಒಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಿತಿ ಸದಸ್ಯರಾದ ಸುನಿತಾ ಮಂಜುನಾಥ್, ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು.
ಮತ್ತಷ್ಟು ಮಾಹಿತಿ: ನಗರಸಭೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು, ಈಗಾಗಲೇ 2ಲೀ.ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಕಾಲಕಾಲಕ್ಕೆ ವಿವಿಧ ಸ್ಥಳಗಳಲ್ಲಿ ನಗರಸಭೆಯಿಂದ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಮೃತ್ ಯೋಜನೆಯಡಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸುವ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆಯೇ ಮತ್ತು ಗಾಂಧಿ ಮೈದಾನದಲ್ಲಿ ಸ್ಟೇಜ್ ನಿರ್ಮಾಣ ಮತ್ತು ಟೌನ್‍ಹಾಲ್ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದರು.
ಪೌರಾಯುಕ್ತರು ಮಾತನಾಡಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಎಸ್.ಟಿ.ಪಿ.ಕಾಮಗಾರಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕ ಶೌಚಾಲಯ ಹಾಗೂ ಗ್ರೀನ್ ರೂಂ ನೊಂದಿಗೆ ರಂಗಮಂದಿರ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು, ಮಾತನಾಡಿ, ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶುಚಿ ಸಂಭ್ರಮ ಕಿಟ್ ಅನ್ನು ನಿಲಯಾರ್ಥಿಗಳಿಗೆ ಸಮರ್ಪಕವಾಗಿ ವಿತರಿಸಲಾಗುತ್ತಿದೆಯೇ ಎಂದು ಉಸ್ತುವಾರಿ ಸಚಿವರು ಇದೇ ಸಂದರ್ಭ ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ತಾ.ಪಂ ಸಿಇಒ ಶೇಖರ್ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯ ನಿಲಯಗಳ ನಿಲಯಾರ್ಥಿಗಳಿಗೆ ಮೆನು ಚಾರ್ಟ್ ಪ್ರಕಾರ ಉತ್ತಮ ಗುಣಮಟ್ಟದ ಆಹಾರವನ್ನು, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಶುಚಿ ಸಂಭ್ರಮ ಕಿಟ್ ಸೇರಿದಂತೆ ಸರ್ಕಾರದಿಂದ ಒದಗಿಸಲಾಗುತ್ತಿದೆ ಎಂದರು.
ಗೃಹ ಲಕ್ಷ್ಮಿಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಶೇಕಡವಾರು ಸಾಧನೆ ಮಾಡಿದೆ ಎಂದು ತಿಳಿಸಿದರು.
ತಾ.ಪಂ.ಸಿಇಒ ಶೇಖರ್ ಅವರು ಮಾತನಾಡಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತಿಂಗಳಿಗೊಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯನ್ನು ನಡೆಸಿ, ಯೋಜನೆಗಳ ಪ್ರಗತಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಉಸ್ತುವಾರಿ ಸಚಿವರು ಮಾತನಾಡಿ, ಸರ್ಕಾರದ ಐದು ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಮತ್ತು ಅವುಗಳ ಬಗ್ಗೆ ಆಗಾಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಲೋಪದೋಷಗಳಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಸಮಸ್ಯೆಗಳು ಎದುರಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆ ಮತ್ತು ರಸಗೊಬ್ಬರದ ಬಗ್ಗೆ ಜಾಗೃತಿ ಮೂಡಿಸುವ ಬಿತ್ತಿಪತ್ರವನ್ನು ಬಿಡಗಡೆಗೊಳಿಸಲಾಯಿತು. ಇದೇ ಸಂದರ್ಭ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದವರಿಗೆ ಹಕ್ಕುಪತ್ರ ವಿತರಿಸಲಾಯಿತು.