2025ರಲ್ಲಿ ಬೆಂಗಳೂರಿನ ದಂಪತಿ ಖರ್ಚು ಮಾಡಿದ ಹಣವೆಷ್ಟು ಗೊತ್ತೇ!
ಬೆಂಗಳೂರು, ಜ.5: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ದಂಪತಿ ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಅವರು 2025ರ ತಮ್ಮ ವಾರ್ಷಿಕ ಖರ್ಚಿನ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ದಂಪತಿಯ ಪ್ರಕಾರ, 2025ರಲ್ಲಿ ಅವರ ಒಟ್ಟು ವೆಚ್ಚ ₹47 ಲಕ್ಷಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಈ ದಂಪತಿ, ವಾರ್ಷಿಕ ಬಾಡಿಗೆಗೆ ₹5 ಲಕ್ಷ ಖರ್ಚು ಮಾಡಿದ್ದಾರೆ. ಫಿಟ್‌ನೆಸ್‌ಗಾಗಿ ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಂಡಿದ್ದು, ಇದಕ್ಕೆ ವರ್ಷಕ್ಕೆ ₹1 ಲಕ್ಷ ವೆಚ್ಚವಾಗಿದೆ. ದಿನಸಿ ಸಾಮಗ್ರಿಗಳು, ಸಲಾಡ್‌ಗಳ ಆರ್ಡರ್ ಮತ್ತು ಹೊರಗಡೆ ಊಟ ಸೇರಿ ಆಹಾರ ವೆಚ್ಚಕ್ಕೆ ₹2.5 ಲಕ್ಷ ಖರ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ಮನೆ ಕೆಲಸಗಾರರು ಹಾಗೂ ವಿವಿಧ ಅಪ್ಲಿಕೇಶನ್‌ಗಳ ಚಂದಾದಾರಿಕೆಗಳಿಗೆ ಒಟ್ಟು ₹1.5 ಲಕ್ಷ, ಆರೈಕೆ ಮತ್ತು ಕ್ಯಾಬ್ ಪ್ರಯಾಣದಂತಹ ಇತರೆ ವೆಚ್ಚಗಳಿಗೆ ₹1.3 ಲಕ್ಷ ವೆಚ್ಚವಾಗಿದೆ.
ಪ್ರವಾಸವೇ ಅತಿದೊಡ್ಡ ವೆಚ್ಚವಾಗಿದ್ದು, 2025ರಲ್ಲಿ 63 ವಿಮಾನ ಪ್ರಯಾಣಗಳನ್ನು ಮಾಡಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳು ಮತ್ತು ಏರ್‌ಬಿಎನ್‌ಬಿಗಳಲ್ಲಿ ಒಟ್ಟು 121 ರಾತ್ರಿ ತಂಗಿದ್ದು, ಪ್ರವಾಸಕ್ಕೆ ಮಾತ್ರ ₹29 ಲಕ್ಷ ಖರ್ಚಾಗಿದೆ. ಕಂಟೆಂಟ್ ನಿರ್ಮಾಣ ಸಂಬಂಧಿತ ವೆಚ್ಚಕ್ಕೆ ₹2.5 ಲಕ್ಷ ಹಾಗೂ ಇತರೆ ಖರೀದಿಗಳಿಗೆ ₹4.5 ಲಕ್ಷ ಖರ್ಚಾಗಿದೆ ಎಂದು ದಂಪತಿ ವಿವರಿಸಿದ್ದಾರೆ.
ಈ ವೆಚ್ಚದ ವಿವರಗಳು ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ದಂಪತಿಯ ಆದಾಯದ ಮೂಲ ಮತ್ತು ಪ್ರಮಾಣದ ಕುರಿತು ಪ್ರಶ್ನೆ ಎತ್ತಿದ್ದರೆ, ಇನ್ನೂ ಕೆಲವರು ನಗರ ಮಧ್ಯಮವರ್ಗದ ಜೀವನಶೈಲಿಯೊಂದಿಗೆ ಹೋಲಿಕೆ ನಡೆಸಿದ್ದಾರೆ. ಹಣ, ಖರ್ಚು ಮತ್ತು ಜೀವನಶೈಲಿ ಕುರಿತ ಚರ್ಚೆಗೆ ಈ ಪೋಸ್ಟ್ ಹೊಸ ಆಯಾಮ ನೀಡಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.