ಗೇಮಿಂಗ್ ಯೂಟ್ಯೂಬರ್‌ ಭೇಟಿಗೆ 15 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ!

Dec 24, 2025 - 23:40
Dec 25, 2025 - 10:10
 0  711
ಗೇಮಿಂಗ್ ಯೂಟ್ಯೂಬರ್‌ ಭೇಟಿಗೆ 15 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ!

ಅಲ್ವಾರ್‌ (ರಾಜಸ್ಥಾನ): ಗೇಮಿಂಗ್‌ ಯೂಟ್ಯೂಬರ್‌ ಆಗಬೇಕೆಂಬ ಆಸೆಯಿಂದ ಬೆಂಗಳೂರಿನ 15 ವರ್ಷದ ಬಾಲಕನೊಬ್ಬ ಮನೆಯವರಿಗೆ ತಿಳಿಸದೇ ಸುಮಾರು 1,900 ಕಿಲೋಮೀಟರ್‌ ದೂರದ ರಾಜಸ್ಥಾನಕ್ಕೆ ಏಕಾಂಗಿಯಾಗಿ ಪ್ರಯಾಣಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಬಾಲಕನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನ ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿ, ಸಾಮಾಜಿಕ ಮಾಧ್ಯಮಗಳಲ್ಲಿ ಗೇಮಿಂಗ್‌ ಚಾನೆಲ್‌ ಗಳನ್ನು ನಿರಂತರವಾಗಿ ಅನುಸರಿಸುತ್ತಿದ್ದ. ರಾಜಸ್ಥಾನದ ಬನ್ಸೂರ್‌ ಪ್ರದೇಶದ ಯೂಟ್ಯೂಬರ್‌ ರನ್ನು ನೇರವಾಗಿ ಭೇಟಿಯಾಗಿ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಕಳೆದ ಶನಿವಾರ ಮನೆ ಬಿಟ್ಟು ಹೊರಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗ ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ವೇಳೆ ಬಾಲಕ ಬೆಂಗಳೂರು ರೈಲು ನಿಲ್ದಾಣದಿಂದ ರೈಲಿನಲ್ಲಿ ಗ್ವಾಲಿಯರ್‌ಗೆ ತೆರಳಿ, ಅಲ್ಲಿಂದ ವಿವಿಧ ಜಿಲ್ಲೆಗಳ ಮೂಲಕ ಬಸ್‌ಗಳಲ್ಲಿ ಪ್ರಯಾಣಿಸಿ ಅಲ್ವಾರ್‌ಗೆ ತಲುಪಿರುವುದು ಪತ್ತೆಯಾಯಿತು.

ಅಲ್ವಾರ್‌ ಬಸ್‌ ನಿಲ್ದಾಣದಲ್ಲಿ ಬಾಲಕ ಒಂಟಿಯಾಗಿ ಅಲೆದಾಡುತ್ತಿದ್ದುದನ್ನು ಗಮನಿಸಿದ ಸಿಬ್ಬಂದಿ ವಿಚಾರಣೆ ನಡೆಸಿ ಸ್ಥಳೀಯ ಸದರ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಬಾಲಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ವೇಳೆ, ಯೂಟ್ಯೂಬರ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ನೇರ ಭೇಟಿಗೆ ಅವಕಾಶ ದೊರಕಲಿಲ್ಲ. ‘ಮೊದಲು ಓದು ಮುಗಿಸಿ, ನಂತರ ಯೂಟ್ಯೂಬರ್‌ ಆಗಿ’ ಎಂಬ ಸಲಹೆ ಮಾತ್ರ ಲಭಿಸಿದೆ ಎಂದು ಬಾಲಕ ತಿಳಿಸಿದ್ದಾನೆ.

ಪೊಲೀಸರು ವಿಷಯವನ್ನು ಬಾಲಕನ ತಂದೆಗೆ ತಿಳಿಸಿದ್ದು, ತಂದೆ ಅಲ್ವಾರ್‌ಗೆ ತೆರಳಿ ಮಗನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕನನ್ನು ವಾಪಸ್‌ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 1
Love Love 1
Funny Funny 1
Angry Angry 0
Sad Sad 1
Wow Wow 1