Kodagu

ಅಪ್ಪ-ಅಮ್ಮ ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಮಾಡಿದ್ದೇನು ಗೊತ್ತೇ!

admincoorgdaily

ಅಪ್ಪ-ಅಮ್ಮ ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಮಾಡಿದ್ದೇನು ಗೊತ್ತೇ!

ಹೈದರಾಬಾದ್: ಯುವ ವೈದ್ಯೆಯೊಬ್ಬರು ತನ್ನ ತಂದೆ-ತಾಯಿ ಮನೆಯಲ್ಲಿ ಬೆಕ್ಕನ್ನು (Pet Cat) ಸಾಕುವಂತಿಲ್ಲ ಎಂದು ಹೇಳಿದರೆಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಸಾಕು ಬೆಕ್ಕನ್ನು ಸಾಕಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಎಂಬಿಬಿಎಸ್ ಮುಗಿಸಿದ 23 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ಸಾಕು ಬೆಕ್ಕನ್ನು ಸಾಕಲು ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಬಿಬಿಎಸ್ ನಂತರ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಆಕೆ ಕಳೆದ 3 ತಿಂಗಳಿನಿಂದ ಸಾಕು ಬೆಕ್ಕನ್ನು ಸಾಕುತ್ತಿದ್ದರು.

 ಆದರೆ, ಆಕೆಯ ಪೋಷಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ಸಾಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಮಾರ್ಚ್ 18ರಂದು, ಮೀರ್‌ಪೇಟ್‌ನಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ರೀತಿಯ ಸಣ್ಣಪುಟ್ಟ ಕಾರಣಗಳಿಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.