State News

ತಾಯಿಯ ಸ್ಮಾರಕಕ್ಕೆ ಹಣ ಕೇಳಿ ನಕಲಿ DRDO ಅಧಿಕಾರಿ ಮಾಡಿದ್ದೇನು ಗೊತ್ತೇ?

admincoorgdaily

ತಾಯಿಯ ಸ್ಮಾರಕಕ್ಕೆ ಹಣ ಕೇಳಿ  ನಕಲಿ DRDO ಅಧಿಕಾರಿ ಮಾಡಿದ್ದೇನು ಗೊತ್ತೇ?

ಬೆಂಗಳೂರು: ಸಾಮಾಜಿಕ ಜಾಲತಾಣ ಮತ್ತು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಬೆಳೆಸಿ, "ನನ್ನ ತಾಯಿಯ ನೆನಪಿನಲ್ಲಿ ಸ್ಮಾರಕ ಕಟ್ಟಿಸುತ್ತಿದ್ದೇನೆ" ಎಂದು ಭಾವುಕ ಕಥೆ ಹೇಳಿ ಮಹಿಳೆಯೊಬ್ಬರಿಂದ 2.3 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ತಾನು DRDO ಹಿರಿಯ ಅಧಿಕಾರಿ ಎಂದು ನಂಬಿಸಿದ್ದ ಆರೋಪಿ, ಹಣ ಪಡೆದ ಬಳಿಕ ಸಂಪರ್ಕ ಕಡಿದುಕೊಂಡಿದ್ದಾನೆ.

 ಹೀಗಿತ್ತು ವಂಚನೆಯ ಕಥೆ; ಆರೋಪಿಯು ಮ್ಯಾಟ್ರಿಮೋನಿ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ. ತಾನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ - DRDOದಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.

ವಿಶ್ವಾಸ ಗಳಿಸಿದ ಬಳಿಕ ತಾಯಿಯ ಅಗಲಿಕೆಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾನೆ. "ತಾಯಿಯ ಸವಿನೆನಪಿಗಾಗಿ ಬೃಹತ್ ಸ್ಮಾರಕ ನಿರ್ಮಿಸುತ್ತಿದ್ದೇನೆ. ತುರ್ತಾಗಿ ಹಣ ಬೇಕು. ಕೆಲಸ ಮುಗಿದ ಕೂಡಲೇ ವಾಪಸ್ ಕೊಡುತ್ತೇನೆ" ಎಂದು ನಂಬಿಸಿದ್ದಾನೆ. ಆತನ ಮಾತು ನಂಬಿದ ಮಹಿಳೆ ಹಂತ ಹಂತವಾಗಿ ಒಟ್ಟು 2.30 ಲಕ್ಷ ರೂ.ವನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.

 ಹಣ ಪಡೆದ ಕೂಡಲೇ ಕಣ್ಮರೆ: ಹಣ ಕೈ ಸೇರುತ್ತಿದ್ದಂತೆ ಆರೋಪಿ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದಾನೆ. ಅನುಮಾನಗೊಂಡ ಮಹಿಳೆ ಆತನ ಹಿನ್ನೆಲೆ ಪರಿಶೀಲಿಸಿದಾಗ ಆತ DRDO ಅಧಿಕಾರಿಯೇ ಅಲ್ಲ ಎಂಬ ಸತ್ಯ ಬಯಲಾಗಿದೆ. ವಂಚನೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಸುಳಿವು ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಿದ್ದಾರೆ. -