ಮಗು ಐಸ್‌ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ತಂದೆ ಮಾಡಿದ್ದೇನು ಗೊತ್ತೇ

ಮಗು ಐಸ್‌ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ತಂದೆ ಮಾಡಿದ್ದೇನು ಗೊತ್ತೇ
ಪತ್ನಿ ಹಾಗೂ ‌ಪತಿ

ಬೆಂಗಳೂರು: ಕಾಡುಗೋಡಿ (Kadugodi) ಠಾಣಾ ವ್ಯಾಪ್ತಿಯ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್ ತಪ್ಪೊಪ್ಪಿಕೊಂಡಿದ್ದಾನೆ. ಮಗು ಐಸ್‌ಕ್ರೀಂ ಬೇಕೆಂದು ಹಠ ಮಾಡಿದಕ್ಕೆ ಆಕೆಯ ಹೊಟ್ಟೆಗೆ ಬಲವಾಗಿ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕೊಲೆಯ ಬಗ್ಗೆ ತಪ್ಪೊಪ್ಪಿಗೆ

ಪೊಲೀಸ್ ತನಿಖೆ ವೇಳೆ ಆರೋಪಿ ಮೋಹನ್ ನೀಡಿದ ಹೇಳಿಕೆ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಮಾರ್ಚ್ 21ರಂದು ಪ್ರಿಯಾಂಕಾ ಮತ್ತು ಮೋಹನ್ ಮಧುರೈಗೆ ಮೂರು ದಿನಗಳ ದೇವಸ್ಥಾನ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 24 ರಂದು ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದೇ ದಿನ ರಾತ್ರಿ ಇಂದಿರಾನಗರದಲ್ಲಿ ಶಾಪಿಂಗ್‌ಗೆ ತೆರಳಿದ್ದ ವೇಳೆ ಘಟನೆ ನಡೆದಿರುವುದಾಗಿ ಆರೋಪಿ ಮೋಹನ್ ಹೇಳಿದ್ದಾನೆ.

ಪ್ರಿಯಾಂಕಾ ಶಾಪಿಂಗ್ ಹೋದ ವೇಳೆ ಕಾರಿನಲ್ಲಿದ್ದ ಮೋಹನ್ ಬಳಿ ಬಾಲಕಿ ಐಸ್‌ಕ್ರೀಂ ಬೇಕೆಂದು ಕೇಳಿದ್ದಳು. ಮೋಹನ್ ಐಸ್‌ಕ್ರೀಂ ತಂದುಕೊಟ್ಟಿದ್ದ. ಆದರೆ ಬೇರೆ ಐಸ್‌ಕ್ರೀಂ ಬೇಕೆಂದು ಮಗು ಅಳಲು ಆರಂಭಿಸಿತ್ತು. ಇದರಿಂದ ಕೋಪಗೊಂಡ ಮೋಹನ್ ಮಗುವಿನ ಹೊಟ್ಟೆಕ್ಕೆ ಬಲವಾಗಿ ಒದ್ದಿದ್ದಾನೆ. ನೋವಿನಿಂದ ಮಗು ಜೋರಾಗಿ ಕಿರುಚಾಡಿದೆ. ಈ ವೇಳೆ ಬಾಯಿಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಬಳಿಕ ನಡೆದಿದ್ದೇನು?

ಘಟನೆ ನಡೆದ ಬಳಿಕ ಶಾಪಿಂಗ್ ಮುಗಿಸಿ ಬಂದ ಪ್ರಿಯಾಂಕಾಗೆ ನಡೆದ ವಿಚಾರವನ್ನು ಮೋಹನ್ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ಪ್ರಕರಣ ಮುಚ್ಚಿಹಾಕಲು ಸಂಚು ರೂಪಿಸಿದ್ದಾರೆ. ಮಗು ಮಲಗಿರುವಂತೆ ಭುಜದ ಮೇಲೆ ಹೊತ್ತು ಕಾಡುಗೋಡಿಯ ವಿಲ್ಲಾಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಪೂರ್ತಿ ಮಗುವಿನ ಮೃತದೇಹವನ್ನು ಮನೆಯಲ್ಲೇ ಇಟ್ಟಿದ್ದಾರೆ. ಮರುದಿನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಮಗು ಮೆಟ್ಟಿಲಿನಿಂದ ಬಿದ್ದಿತ್ತು. ನಾವು ಆಕೆಯನ್ನು ಮಲಗಿಸಿದ್ದೆವು ಎಂದು ಕಥೆ ಕಟ್ಟಿದ್ದಾರೆ. ಆದರೆ, ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಗ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಗೋಳಾಡಿ ಹೈಡ್ರಾಮಾ ಮಾಡಿದ್ದಾಳೆ.

ಪತಿಗೆ ಮೋಸ

ಪ್ರಿಯಾಂಕಾ ಪತಿ ಪ್ರವೀಣ್ ಕೂಡ ಪತ್ನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಿಯಾಂಕಾಗೆ ಪ್ರವೀಣ್ ಜೊತೆ ಮದುವೆಯಾಗಿತ್ತು. ಮದುವೆಗೂ ಮುನ್ನ ಪ್ರಿಯಾಂಕಾ ಹಾಗೂ ಮೋಹನ್ ನಡುವೆ ಪ್ರೇಮ ಸಂಬಂಧವಿತ್ತು. ಬಳಿಕ ಬ್ರೇಕಪ್ ಆಗಿತ್ತು. ಆದರೆ, ಹಲವು ವರ್ಷಗಳ ಬಳಿಕ ಇಬ್ಬರೂ ಮತ್ತೆ ಸಂಪರ್ಕದಲ್ಲಿದ್ದರು. ಮೋಹನ್ ನಂಬರ್ ಅನ್ನು ‘ಅಡ್ವೊಕೇಟ್ ಸಾನ್ವಿ’ ಎಂದು ಸೇವ್ ಮಾಡಿಕೊಂಡು ಪ್ರಿಯಾಂಕಾ ಪ್ರತಿದಿನ ಮಾತನಾಡುತ್ತಿದ್ದಳು. ಇಬ್ಬರೂ ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಪತಿ-ಪತ್ನಿ ಎಂದು ಹೇಳಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರವೀಣ್ ಆರೋಪಿಸಿದ್ದಾರೆ.

ಹೊಸಕೋಟೆ ರಸ್ತೆಯಲ್ಲಿರುವ ಪ್ರಿಯಾಂಕಾ ಜಮೀನಿನ ವ್ಯಾಜ್ಯ ಪ್ರಕರಣದ ವೇಳೆ ಹಳೇ ಪ್ರೇಮಿ ಮೋಹನ್ ಮತ್ತೇ ಪರಿಚಯವಾಗಿದ್ದ. ಮೋಹನ್ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿದ್ದು, ಸಾನ್ವಿಪ್ರಿಯ ಬಿಲ್ಡ್‌ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪಾಲುದಾರನಾಗಿದ್ದ. ಮೋಹನ್ ತನ್ನ ಪತ್ನಿ ವಾಸಿಸುವ ಸ್ಥಳದಿಂದ ಸುಮಾರು ೩೦೦ ಮೀಟರ್ ದೂರದಲ್ಲಿ ಪ್ರಿಯಾಂಕಾಳನ್ನು ಇರಿಸಿದ್ದ. ಈ ವಿಚಾರ ತಿಳಿದ ಮೋಹನ್ ಪತ್ನಿ ವಿಲ್ಲಾ ಬಳಿ ಬಂದು ಗಲಾಟೆ ಸಹ ಮಾಡಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಕಾಡುಗೋಡಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ