CRIME

ಪತ್ನಿಗೆ ನೇಣು ಹಾಕಿ, ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ಪತಿ ಮಾಡಿದ್ದೇನು ಗೊತ್ತೇ?

admincoorgdaily

ಪತ್ನಿಗೆ ನೇಣು ಹಾಕಿ, ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ಪತಿ ಮಾಡಿದ್ದೇನು ಗೊತ್ತೇ?

ಬಾಗಲಕೋಟೆ:ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನಪಟ್ಟು ವ್ಯಕ್ತಿಯೊಬ್ಬ ನೇಣು ಹಾಕಿ ಹತ್ಯೆಗೈದ ಬಳಿಕ ಆಕೆ ಒದ್ದಾಡುವುದನ್ನು ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಅಮಾನವೀಯ ಘಟನೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಮಹಾಲಿಂಗಪುರ ಮೂಲದ ಭಾಗ್ಯಶ್ರೀ ಜಿಗಳೂರು (23) ಕೊಲೆಯಾದ ಮಹಿಳೆ. ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆ ಆರೋಪಿ.

 ಜಗಳದ ಕಾರಣ ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದ ಭಾಗ್ಯಶ್ರೀ ಅವರನ್ನು ಜು.27 ರಂದು "ಚೆನ್ನಾಗಿ ಕೂಡಿ ಬಾಳೋಣ" ಎಂದು ಪ್ರವೀಣ್ ಗಲಗಲಿ ಮನೆಗೆ ಕರೆತಂದಿದ್ದ. ಅದೇ ದಿನ ಸಂಜೆ ಮನೆಯಲ್ಲಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಪ್ರವೀಣ್ ಪತ್ನಿಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ, ಬಳಿಕ ನೇಣು ಬಿಗಿದಿದ್ದಾನೆ.

ಆಕೆ ಪ್ರಾಣ ಸಂಕಟದಲ್ಲಿ ಒದ್ದಾಡುತ್ತಿದ್ದಾಗ ಆರೋಪಿ ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ. ಅಲ್ಲದೇ ಆ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ನೇಣು ಹಾಕಿದ ಕುಣಿಕೆಯ ಹಿಂದೆ ಮದುವೆ ಸಮಯದಲ್ಲಿ ಬರೆದಿದ್ದ ಇಬ್ಬರ ಹೆಸರು ಕೂಡ ಸೆರೆಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.