State News

ಆಸ್ಪತ್ರೆಯ OTಯಲ್ಲಿ ಜೂನಿಯರ್ ಟೆಕ್ನಿಷಿಯನ್ ಮಾಡಿದ್ದೇನು ಗೊತ್ತಾ!

admincoorgdaily

ಆಸ್ಪತ್ರೆಯ OTಯಲ್ಲಿ ಜೂನಿಯರ್ ಟೆಕ್ನಿಷಿಯನ್ ಮಾಡಿದ್ದೇನು ಗೊತ್ತಾ!

ಬೆಂಗಳೂರು: ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ (ಒಟಿ) ಡ್ರೆಸಿಂಗ್ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದ್ದ ಜೂನಿಯರ್ ಟೆಕ್ನಿಷಿಯನ್‌ ಒಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ಎರಡನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯ ನಿರ್ದೇಶಕ ಡಾ. ಚೇತನ್ ನೀಡಿದ ದೂರಿನ ಮೇರೆಗೆ, ಪಶ್ಚಿಮ ಬಂಗಾಳ ಮೂಲದ ಸುವೆಂದು ಮೊಹತಾ (23) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಳೆದ ಒಂದು ವರ್ಷದಿಂದ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಜೂನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕೊಟ್ಟಿಗೆಪಾಳ್ಯದ ಪಿಜಿಯೊಂದರಲ್ಲಿ ವಾಸವಾಗಿದ್ದ. ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಶಸ್ತ್ರಚಿಕಿತ್ಸಾ ಘಟಕದ ಡ್ರೆಸಿಂಗ್ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುತ್ತಿದ್ದ ಸಂದರ್ಭ, ಅಲ್ಲಿ ಇಡಲಾಗಿದ್ದ ಮೊಬೈಲ್‌ ಅವರ ಗಮನಕ್ಕೆ ಬಂದಿದೆ.

ಅನುಮಾನಗೊಂಡ ಸಿಬ್ಬಂದಿ ಮೊಬೈಲ್ ಪರಿಶೀಲಿಸಿದಾಗ, ರಹಸ್ಯವಾಗಿ ವಿಡಿಯೋ ಚಿತ್ರೀಕರಣ ನಡೆಯುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಜಪ್ತಿ ಮಾಡಲಾದ ಮೊಬೈಲ್‌ನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ಮಹಿಳೆಯರ ಗೌಪ್ಯತೆಗೆ ಧಕ್ಕೆ ತಂದಿರುವ ಆರೋಪದಡಿ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.