“ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿದ್ದಾರೆ” ಎಂದು ಅಂಗೈ ಮೇಲೆ ಬರೆದಿಟ್ಟು ವೈದ್ಯೆ ಆತ್ಮಹತ್ಯೆ
ಮುಂಬೈ, ಅ.24: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರು ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಮುನ್ನ ವೈದ್ಯೆ ತಮ್ಮ ಅಂಗೈ ಮೇಲೆಯೇ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಬರೆದುಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಬೀಡ್ ಮೂಲದ 28 ವರ್ಷದ ಯುವ ವೈದ್ಯೆ ಆತ್ಮಹತ್ಯೆ ಮಾಡಿಕೊಂಡವರು. ಸತಾರಾ ಜಿಲ್ಲೆಯ ಫಾಲ್ಸನ್ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಕಳೆದ ಐದು ತಿಂಗಳಿನಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ತಮ್ಮ ಮೇಲೆ ಪದೇಪದೇ ಅತ್ಯಾಚಾರ ಎಸಗಿದ್ದರೆಂದು ಹಾಗೂ ಮನೆಯ ಮಾಲೀಕರಾದ ಪ್ರಶಾಂತ್ ಬಂಕರ್ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಅವರು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯೆಯ ಅಂಗೈ ಮೇಲಿನ ಬರಹ ಮತ್ತು ಸೂಸೈಡ್ ನೋಟ್‌ನ ವಿಧಿವಿಜ್ಞಾನ ಪರೀಕ್ಷೆ ಪ್ರಾರಂಭಗೊಂಡಿದ್ದು, ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸತಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚೆ ನಡೆಸಿ, ಪ್ರಕರಣದಲ್ಲಿ ಉಲ್ಲೇಖಗೊಂಡ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹಾಗೂ ಕಠಿಣ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.