Kodagu

ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಗೆ 100 ಕುರ್ಚಿ ಕೊಡುಗೆ

admincoorgdaily

ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಗೆ 100 ಕುರ್ಚಿ ಕೊಡುಗೆ

ಗೋಣಿಕೊಪ್ಪ: ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ 100 ಕುರ್ಚಿಗಳನ್ನು ಶಾಲೆಗೆ ನೀಡಲಾಯಿತು. ಶಾಲೆಯ ವಿವೇಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಪ್ರಮೋದ್ ಕಾಮತ್ ಅವರು ಕುರ್ಚಿಗಳನ್ನು ಶಾಲೆಗೆ ಹಸ್ತಾಂತರಿಸಿದರು.

 ಬಳಿಕ ಮಾತನಾಡಿದ ಅವರು, ಕುರ್ಚಿಯ ಮಹತ್ವವನ್ನು ಅರಿತು ಅದನ್ನು ಸದ್ಗುಣದಿಂದ ಬಳಸಿಕೊಳ್ಳಬೇಕು. ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವೆಯ ಭಾಗವಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಗಳನ್ನು ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಮೂಲಕ ಸಮಾಜದ ಮಾದರಿ ಪ್ರಜೆಗಳಾಗುವ ಕನಸು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

 ಗ್ರಾಪಂ ಮಾಜಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಲಿತು ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದರು. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ ಮೋಹನ್ ಮಾತನಾಡಿ, ಹಿಂದೆ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಎದುರಾಗುತ್ತಿತ್ತು. ಆದರೆ ಇಂದು ಸರ್ಕಾರದ ಜೊತೆಗೆ ದಾನಿಗಳೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ದಾನಿಗಳ ಕೊಡುಗೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಕುರ್ಚಿಯಂತಹ ಸಣ್ಣ ಸೌಲಭ್ಯವೂ ವಿದ್ಯಾರ್ಥಿಗಳ ಕಲಿಕೆಗೆ ದೊಡ್ಡ ನೆರವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಭವಿಷ್ಯದಲ್ಲಿ ಉನ್ನತ ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಸಮಾಜದ ಮಾದರಿ ಪ್ರಜೆಗಳಾಗಿ ರೂಪುಗೊಳ್ಳುವ ಗುರಿ ಹೊಂದಬೇಕು. ತಮ್ಮ ಕಲಿಕೆಗೆ ಪೂರಕವಾಗಿ ಸಹಕಾರ ನೀಡಿದವರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

 ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್, ರೋಟರಿ ಸಂಸ್ಥೆಯ ಶುಭಾಷಿಣಿ ಮಾತನಾಡಿದರು. ರೋಟರಿ ಸಂಸ್ಥೆಯ ಪ್ರಮುಖರಾದ ಸುಮಿ ಸುಬ್ಬಯ್ಯ, ಕಾಡ್ಯಮಾಡ ನವೀನ್, ಮನೆಯಪಂಡ ಮಾಚಯ್ಯ, ನಾರಾಯಣ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು.