ಫೆ.7 ರಂದು ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ ಸಹಕಾರಕ್ಕೆ ಡಾ.ಲೋಕೇಶ್ ಮನವಿ

Feb 5, 2026 - 14:01
 0  229
ಫೆ.7 ರಂದು ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ ಸಹಕಾರಕ್ಕೆ ಡಾ.ಲೋಕೇಶ್ ಮನವಿ

ಮಡಿಕೇರಿ ಫೆ.04:-ಕೊಡಗು ಜಿಲ್ಲಾಡಳಿತ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ದಿಶಾ ಭೋದ್ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿದ್ಯವಿದ್ಯಾನಿಲಯ ಸೇರಿದಂತೆ ಕಾಲೇಜುಗಳ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ ಹಾಗೂ ಅಂಗಾಂಗ ದಾನ ಅಭಿಯಾನ(ಜೀವ ಸಾರ್ಥಕತೆ ಅಭಿಯಾನ) ಮತ್ತು ಜಾಥ ಕಾರ್ಯಕ್ರಮವು ಫೆಬ್ರವರಿ, 07 ರಂದು ಮಡಿಕೇರಿ ನಗರದಲ್ಲಿ ನಡೆಯಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್ ಅವರು ತಿಳಿಸಿದ್ದಾರೆ.

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಫೆಬ್ರವರಿ, 07 ರಂದು ಬೆಳಗ್ಗೆ 7 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಜಾಥ ಹೊರಡಲಿದ್ದು, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ಬಿ.ದೇವಯ್ಯ ವೃತ್ತದ ಮೂಲಕ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲಿದೆ. ಈ ಸಂದರ್ಭದಲ್ಲಿ ಬೀದಿನಾಟಕ ಪ್ರದರ್ಶನ ನಡೆಸಿ, ನಶಾ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಲೋಕೇಶ್ ಅವರು ವಿವರಿಸಿದರು.  

ನಶಾ ಮುಕ್ತ ಭಾರತ ಸಂಬಂಧ ಹೆಚ್ಚಿನ ಅರಿವು ಮೂಡಿಸುವಲ್ಲಿ ಪ್ಲೇ ಕಾರ್ಡ್ ಪ್ರದರ್ಶನ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ.ಲೋಕೇಶ್ ಅವರು ಹೇಳಿದರು. 

ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಕೆಟ್ಟ ಪರಿಣಾಮ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆ ದಿಸೆಯಲ್ಲಿ ಅಭಿಯಾನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಸ್ಥಾನೀಕ ವೈದ್ಯಾಧಿಕಾರಿ ಡಾ.ಧನಂಜಯ ಅವರು ಮಾತನಾಡಿ ಅಂಗಾಂಗ ದಾನ ಮಹತ್ವದ ಕುರಿತು ಜಾಗೃತಿ ಅಭಿಯಾನವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. 

ಅಂಗಾಂಗ ದಾನ ಮಾಡುವುದರಿಂದ ಇತರರ ಜೀವವನ್ನು ಉಳಿಸಬಹುದಾಗಿದೆ. ಆ ನಿಟ್ಟಿನಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ ಎಂದರು. 

ಡಾ.ಮೋಹನ್ ಅಪ್ಪಾಜಿ ಅವರು ಮಾತನಾಡಿ ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ, ಅಂಗಾಂಗ ದಾನ ಅಭಿಯಾನದಲ್ಲಿ ಲಯನ್ಸ್ ಸಂಸ್ಥೆ, ಸಂಸ್ಕೃತಿ ಸಿರಿ ಬಳಗ, ರಾಮೋತ್ಸವ, ಮುತ್ತಪ್ಪ ದೇವಾಲಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಲಿವೆ ಎಂದು ಮಾಹಿತಿ ನೀಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ದಿಸೆಯಲ್ಲಿ ಫೆಬ್ರವರಿ, 15 ರವರೆಗೆ ವಿವಿಧ ಶಾಲಾ, ಕಾಲೇಜು ಹಂತದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 

ಮಾದಕ ವಸ್ತುಗಳನ್ನು ತೆಗೆದುಕೊಂಡಲ್ಲಿ ಯಾವ ಯಾವ ಕಾಯಿಲೆಗಳು ಬರುತ್ತವೆ ಎಂಬ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಮಾದಕ ವಸ್ತುಗಳಿಂದ ದೂರವಿರುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಮಾದಕ ವಸ್ತು ತೆಗೆದುಕೊಳ್ಳುವುದರಿಂದ ಅವರ ಆರೋಗ್ಯದ ಹಾಗೂ ಕುಟುಂಬದ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ.ಸತೀಶ್ ಕುಮಾರ್ ಅವರು ನುಡಿದರು. 

ವೈದ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ್ ಅವರು ಮಾತನಾಡಿ ಅಂಗಾಂಗ ದಾನವನ್ನು ಸ್ವಯಂ ಪ್ರೇರಣೆಯಿಂದ ಮಾಡಲು ಮುಂದಾಗಬೇಕು. ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರ ಅಮೂಲ್ಯ ಜೀವ ಉಳಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಅವರು ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಡಾ.ಅಭಿನಂದನ್, ಡಾ.ಸುಮುಖ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಇತರರು ಇದ್ದರು.

What's Your Reaction?

Like Like 2
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 0