ಕೊಡಗಿನಲ್ಲಿ ಕಾಂಗ್ರೆಸ್ ಜೀವಂತವಾಗಿರಲು ಡಾ. ಮಂತರ್ ಗೌಡರ ಸೇವೆ ಮಹತ್ವದ್ದು;ಮೈಸಿ ಕತ್ತಣಿರ ಶಾಸಕ ಡಾ.ಮಂತರ್ ಗೌಡ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ
admincoorgdaily

ಮಡಿಕೇರಿ;ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಹಾಗೂ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಿಸುವಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು,ಜನಸೇವೆಯೇ ತಮ್ಮ ಮುಖ್ಯ ಗುರಿ ಎಂಬ ಧ್ಯೇಯದೊಂದಿಗೆ ಅವರು ರಾಜಕೀಯ, ಸಮಾಜ ಸೇವೆ, ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ಕಾರ್ಯಗಳನ್ನು ನಡೆಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದಿಂದ ಸಾರ್ವಜನಿಕ ಜೀವನಕ್ಕೆ ಬಂದಿರುವ ಡಾ. ಮಂತರ್ ಗೌಡ ಅವರು ಬಡವರು, ರೈತರು, ಯುವಕರು ಹಾಗೂ ವಿವಿಧ ಸಮುದಾಯಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ನೆರವು, ಆರೋಗ್ಯ ಶಿಬಿರಗಳ ಆಯೋಜನೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಅವರು ಜನರ ವಿಶ್ವಾಸ ಗಳಿಸಿದ್ದಾರೆಂದು ಮೈಸಿ ಕತ್ತಣಿರ ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೂ ಡಾ. ಮಂತರ್ ಗೌಡ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಕೂಟಗಳಿಗೆ ಉತ್ತೇಜನ ನೀಡುವುದು, ಕ್ರೀಡಾಪಟುಗಳಿಗೆ ಸಹಕಾರ ಒದಗಿಸುವುದು ಹಾಗೂ ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಕ್ರೀಡೆ ಯುವಕರನ್ನು ಆರೋಗ್ಯವಂತರನ್ನಾಗಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಶಿಸ್ತು ಮತ್ತು ಏಕತೆಯನ್ನು ಬೆಳೆಸುತ್ತದೆ ಎಂಬ ನಂಬಿಕೆಯಿಂದ ಅವರು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಕೊಡಗಿನ ಸಮಗ್ರ ಅಭಿವೃದ್ಧಿ, ಪಕ್ಷದ ಸಂಘಟನೆ ಮತ್ತು ಜನಪರ ಸೇವೆಗಳಲ್ಲಿ ಡಾ. ಮಂತರ್ ಗೌಡ ಅವರು ತೊಡಗಿಸಿಕೊಂಡಿರುವುದರಿಂದ, ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಜೀವಂತವಾಗಿ ಉಳಿಯಲು ಹಾಗೂ ಇನ್ನಷ್ಟು ಬಲಗೊಳ್ಳಲು ಅವರ ಸೇವೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ಆದ್ದರಿಂದ ಸಮಾಜ ಸೇವೆ, ಕ್ರೀಡಾ ಪ್ರೋತ್ಸಾಹ, ಯುವಜನರ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಡಾ. ಮಂತರ್ ಗೌಡ ಅವರಿಗೆ ಸೂಕ್ತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂಬುದು ಕೊಡಗಿನ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದೆ.
ಇಂತಹ ಜವಾಬ್ದಾರಿ ದೊರೆತರೆ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುವುದರ ಜೊತೆಗೆ ರಾಜ್ಯ ಮಟ್ಟದಲ್ಲಿಯೂ ಜಿಲ್ಲೆಯ ಧ್ವನಿ ಬಲವಾಗಲಿದೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ ಮೈಸಿ ಕತ್ತಣಿರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.