ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ: 55.88 ಕೋಟಿ ರೂ. ಮೌಲ್ಯದ MDMA ವಶ
admincoorgdaily

ಬೆಂಗಳೂರು, ಡಿ. 28: ಮಹಾರಾಷ್ಟ್ರದ ಮಾದಕ ದ್ರವ್ಯ ವಿರೋಧಿ ದಳ(ANTF)ದ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 55.88 ಕೋಟಿ ರೂ. ಮೌಲ್ಯದ MDMA ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಮುಂಬೈನಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಬಂಧಿತನಾಗಿದ್ದ ಅಬ್ದುಲ್ಲಾ ಖಾದರ್ ಶೇಖ್ ನೀಡಿದ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆತನ ಹೇಳಿಕೆ ಮೇರೆಗೆ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ನನ್ನು ಬಂಧಿಸಲಾಗಿದ್ದು, ಆತನಿಂದ ಲಭ್ಯವಾದ ಮಾಹಿತಿಯಂತೆ ಮಹಾರಾಷ್ಟ್ರದ ಪೊಲೀಸರು ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿದ್ದಾರೆ.
ಹೊರಮಾವು, ಯರಪ್ಪನಹಳ್ಳಿ ಹಾಗೂ ಕಣ್ಣೂರು ಸಮೀಪ ಕಾರ್ಯನಿರ್ವಹಿಸುತ್ತಿದ್ದ ಮೂರು ಸ್ಥಳಗಳಲ್ಲಿ ಡ್ರಗ್ಸ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ದಾಳಿ ವೇಳೆ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ ಒಟ್ಟು 21.4 ಕೆಜಿ ಮಾದಕ ದ್ರವ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಜಾಲದ ಮೂಲಕ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಮಾದಕ ದ್ರವ್ಯ ಪೂರೈಕೆ ನಡೆಯುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಜಾಲಕ್ಕೆ ಸಂಬಂಧಿಸಿದ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಮಹಾರಾಷ್ಟ್ರದ ಪೊಲೀಸರು ತಿಳಿಸಿದ್ದಾರೆ.
ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಸ್ಥಳಗಳು:
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಂದನ ಲೇಔಟ್
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ. ಗೋಲ್ಲಹಳ್ಳಿ
ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರಪ್ಪನಹಳ್ಳಿ