ಮೊಟ್ಟೆ ಸೇವನೆ ಸುರಕ್ಷಿತ: ಕ್ಯಾನ್ಸರ್ ಅಪಾಯ ಎಂಬ ಆರೋಪ ತಳ್ಳಿಹಾಕಿದ FSSAI

Dec 21, 2025 - 13:13
 0  480
ಮೊಟ್ಟೆ ಸೇವನೆ ಸುರಕ್ಷಿತ: ಕ್ಯಾನ್ಸರ್ ಅಪಾಯ ಎಂಬ ಆರೋಪ ತಳ್ಳಿಹಾಕಿದ FSSAI
Photo credit:freepic (ಸಾಂದರ್ಭಿಕ ಚಿತ್ರ)

ಹೊಸದಿಲ್ಲಿ, ಡಿ.21: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಇತ್ತೀಚಿನ ಆರೋಪಗಳು ಆಧಾರರಹಿತವಾಗಿದ್ದು, ಸಾರ್ವಜನಿಕರಲ್ಲಿ ಅನಗತ್ಯ ಭಯ ಸೃಷ್ಟಿಸುವ ಪ್ರಯತ್ನ ಮಾತ್ರ ಎಂದು ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ FSSAI ಸ್ಪಷ್ಟಪಡಿಸಿದೆ.

ಈ ಕುರಿತು ಶನಿವಾರ ಪ್ರಕಟಿಸಿದ ಹೇಳಿಕೆಯಲ್ಲಿ, ದೇಶದಲ್ಲಿ ಉತ್ಪಾದನೆ ಮತ್ತು ಮಾರಾಟವಾಗುತ್ತಿರುವ ಮೊಟ್ಟೆಗಳು ಮಾನವ ಬಳಕೆಗೆ ಸಂಪೂರ್ಣ ಸುರಕ್ಷಿತವಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ. ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ ಎಂಬ ಆರೋಪಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲವೆಂದು ಅದು ಸ್ಪಷ್ಟವಾಗಿ ಹೇಳಿದೆ.

ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಉತ್ಪಾದನೆಯ ಎಲ್ಲ ಹಂತಗಳಲ್ಲಿಯೂ ಆರೋಗ್ಯಕ್ಕೆ ಅಪಾಯಕಾರಿಯಾದ ನೈಟ್ರೊಫ್ಯೂರಾನ್‌ ಗಳ ಬಳಕೆಯನ್ನು ಆಹಾರ ಸುರಕ್ಷತೆ ಹಾಗೂ ಮಾನದಂಡಗಳ (ಮಾಲಿನ್ಯ, ವಿಷಕಾರಿ ಪದಾರ್ಥಗಳು ಮತ್ತು ಅವಶೇಷಗಳು) ನಿಯಮಾವಳಿ–2011 ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು FSSAI ತಿಳಿಸಿದೆ.

ಒಂದೆರಡು ಸೀಮಿತ ಪ್ರಯೋಗಾತ್ಮಕ ಅಧ್ಯಯನಗಳನ್ನು ಆಧರಿಸಿ ಮೊಟ್ಟೆಗಳನ್ನು ಅಸುರಕ್ಷಿತವೆಂದು ಸಾಮಾನ್ಯೀಕರಣ ಮಾಡುವುದು ವೈಜ್ಞಾನಿಕವಾಗಿ ಸಮಂಜಸವಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಹಕರು ದೃಢೀಕೃತ ವೈಜ್ಞಾನಿಕ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕೆಂದು ಮನವಿ ಮಾಡಿರುವ ಪ್ರಾಧಿಕಾರ, ಆಹಾರ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ಉತ್ಪಾದಿಸಲಾದ ಮೊಟ್ಟೆಗಳು ಸುರಕ್ಷಿತವೂ ಪೌಷ್ಟಿಕವೂ ಆಗಿವೆ ಎಂದು FSSAI ಪುನರುಚ್ಚರಿಸಿದೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0