ರೈಲ್ವೆ ಹಳಿಗೆ ಸಿಲುಕಿ ಕೊಡಗಿನ ವೃದ್ಧ ದಂಪತಿ ಹಾಸನದಲ್ಲಿ ಆತ್ಮಹತ್ಯೆ
admincoorgdaily

ಮಡಿಕೇರಿ, ಫೆ. 22: ಹಾಸನದಲ್ಲಿ ರೈಲು ಹಳಿಗೆ ಸಿಲುಕಿ ಜಿಲ್ಲೆಯ ಮೂಲದ ವೃದ್ಧ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶನಿವಾರಸಂತೆ ಬಳಿಯ ಹಾರೆಹೊಸೂರು ಗ್ರಾಮದ ಡೇವಿಡ್ (82) ಮತ್ತು ಮೇರಿ (75) ಮೃತ ದುರ್ದೈವಿಗಳು.
ಶನಿವಾರ ರಾತ್ರಿ ಕರೀಗೌಡ ಬಡಾವಣೆ ಸಮೀಪದ ರೈಲ್ವೆ ಹಳಿಯನ್ನು ದಾಟುವಾಗ ಅಥವಾ ಹಳಿಯ ಬಳಿ ಇದ್ದ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ದಂಪತಿ ಪುತ್ರ ಮೃತದೇಹಗಳನ್ನು ನೋಡಿ ಗುರುತಿಸಿದ್ದಾರೆ.
ಮೃತ ದಂಪತಿಗೆ ಇಬ್ಬರು ಪುತ್ರರಿದ್ದು, ಓರ್ವ ಬೆಂಗಳೂರಿನಲ್ಲಿ, ಮತ್ತೋರ್ವ ಶನಿವಾರಸಂತೆಯಲ್ಲಿ ನೆಲೆಸಿದ್ದಾರೆ. ಆರೈಕೆ ಮಾಡುವವರಿಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಸ್ತಿ ಮನೆ, ಕಾಫಿ ತೋಟ ಹೊಂದಿದ್ದರೂ ವೃದ್ಧಾಪ್ಯದಲ್ಲಿ ಅರೈಕೆ ಮಾಡುವವರಿಲ್ಲದೆ ದಂಪತಿ ಒಂಟಿಯಾಗಿದ್ದರು. ಕೆಲ ದಿನ ವೀರಾಜಪೇಟೆಯ ವೃದ್ದಾಶ್ರಮಕ್ಕೂ ಸೇರಿದ್ದ ದಂಪತಿ ತೀವ್ರ ನೋವಿನಲ್ಲಿದ್ದರು.
ಇದರಿಂದ ನೊಂದು ಹಾಸನಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪ್ರಸ್ತುತ ಹಾಸನ ಬಡಾವಣೆ ಪೊಲೀಸ್ ಠಾಣೆ ಹಾಗೂ ರೈಲ್ವೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.