ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ

Apr 18, 2026 - 16:27
 0  256
ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ

ಮಡಿಕೇರಿ ಏ.18:-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 7ನೇ ಕೊಡವ ಪುಸ್ತಕ ಪತ್ತಾಯವನ್ನು ಸುಂಟಿಕೊಪ್ಪನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಲಾಯಿತು. 

ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಉದ್ಘಾಟಿಸಿದ ಪುಸ್ತಕ ಪತ್ತಾಯ ಸ್ಥಾಪನಾ ಸಮಾರಂಭದ ವೇಳೆ ವೇದಿಕೆಯಲ್ಲಿ ಸುಂಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷರಾದ ಚೇಂದ್ರಿಮಡ ಕರುಂಬಯ್ಯ, ಹಿರಿಯ ಸಮಾಜ ಸೇವಕರಾದ ಪುಡಿಯಂಡ ಮುತ್ತಣ್ಣ, ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಅರುಣ್ ಮೊಣ್ಣಪ್ಪ, ಸುಂಟಿಕೊಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬೊಳಂದಂಡ ಸರೋಜಿನಿ ದೇವಯ್ಯ, ಸಮಾಜ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಹಾಗೂ ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ ಉಪಸ್ಥಿತರಿದ್ದರು.

ನಂತರ ಕೊಡವರ ಹೊಸ ವರ್ಷ ಎಡಮ್ಯಾರ್ ಒಂದಕ್ಕೆ ಶುಭ ಕೋರಿ ಮಾತನಾಡಿದ ಅಧ್ಯಕ್ಷ ಮಹೇಶ್ ನಾಚಯ್ಯ, ಯಾವುದೇ ಭಾಷೆಯಾದರೂ ಸರಿ, ಸಾಹಿತ್ಯ ರಚನೆಯಾದಷ್ಟು ಭಾಷೆಯು ಗಟ್ಟಿಗೊಳ್ಳುವುದು. ಕೊಡವ ಭಾಷೆಯು ಸಾಹಿತಿಕವಾಗಿ ಮತ್ತಷ್ಟು ಬೆಳೆಯಬೇಕಾಗಿದೆ. ಕೊಡವ ಭಾಷೆಯಲ್ಲಿ ಓದುವ, ಬರೆಯುವ ಪ್ರವೃತ್ತಿಯನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಬೇಕಾದ ಅನಿವಾರ್ಯತೆ ಭಾಷೆಯ ಭವಿಷ್ಯವನ್ನು ನಿರ್ಣಯಿಸುತ್ತದೆ. 1924ರ ಅವಧಿಯಲ್ಲಿ ನಡಿಕೇರಿಯಂಡ ಚಿಣ್ಣಪ್ಪನವರು ಕೊಡವ ಜಾನಪದ ಗ್ರಂಥ ‘ಪಟ್ಟೋಲೆ ಪಳಮೆ’ಯನ್ನು ಹೊರತಂದಿರುವುದು ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಭದ್ರ ಬುನಾದಿಯಂತಿದೆ ಎಂದರು. 

ಹರದಾಸ ಅಪ್ಪಚ್ಚಕವಿ, ಬಾಚಮಡ ಡಿ.ಗಣಪತಿ, ಐಮಾ ಮುತ್ತಣ್ಣರು ಸಮಕಾಲೀನರಾಗಿ ಇದ್ದುಕೊಂಡು ಹೊರತಂದಂತಹ ಹಲವು ಕೃತಿಗಳು ಕೊಡವ ಭಾμÉಯ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಂತಿದೆ. ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ದಾರಿ ಮಾಡಿಕೊಟ್ಟಂತಾಗುವುದು ಎಂದರು.

ಕೊಡವ ಅಕಾಡೆಮಿಯು ಈಗಾಗಲೇ ಹಲವು ವಿಧದ ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ವಿಷಯಾಧಾರಿತ ಪುಸ್ತಕಗಳನ್ನು ಹೊರತರಬೇಕಿದೆ. ಕೊಡವ ಜನಾಂಗವು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವಾಗಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ನುಡಿದರು. 

ಹಿರಿಯ ಸಮಾಜ ಸೇವಕರಾದ ಪುಡಿಯಂಡ ಮುತ್ತಣ್ಣನವರು ಮಾತನಾಡಿ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ದಾನವಾಗಿ ಸಿಕ್ಕ ಜಾಗದ ಬಗ್ಗೆ ಹಾಗೂ ಸಮಾಜ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.  

ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ‘ಕೊಡವ ಪುದಿಯ ಕಾಲ ಎಡಮ್ಯಾರ್ ಒಂದ್’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. 

 ಈ ವೇಳೆ ಅಕಾಡೆಮಿಯ ವತಿಯಿಂದ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ಕೊಡವ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಾಗೂ ನಾಲ್ಕು ದುಡಿಗಳನ್ನು ಹಸ್ತಾಂತರಿಸಿದರು. 

ನಾಪಂಡ ಡಾಟಿ ಈರಪ್ಪ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಸ್ವಾಗತಿಸಿದರು, ಅಜ್ಜಿಕುಟ್ಟಿರ ಸುನೀತ ಗಿರೀಶ್ ನಿರೂಪಿಸಿದರು. ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0