ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ:ಯುಕೊ ಸಂಘಟನೆಯಿಂದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ:ಯುಕೊ ಸಂಘಟನೆಯಿಂದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ಗೋಣಿಕೊಪ್ಪ;ಈ ಸಾಲಿನ ಬಜೆಟ್ ಅಧಿವೇಶನದ ಮೊದಲ ದಿನವೇ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಪ್ರಯತ್ನದಿಂದ ಕರ್ನಾಟಕ ರಾಜ್ಯ ಘನ ಸರಕಾರ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಘೋಷಣೆ ಮಾಡಿದ್ದು, ಈ ಸಂಭ್ರಮವನ್ನು ಗೋಣಿಕೊಪ್ಪಲುವಿನಲ್ಲಿ ಶಾಸಕರಿಗೆ ಸನ್ಮಾನಿಸುವ ಮೂಲಕ ಆಚರಿಸಲಾಯಿತು.

ಅಧಿವೇಶನದ ಮೊದಲ ದಿನ ಮುಗಿಸಿ ಕ್ಷೇತ್ರಕ್ಕೆ ಶಾಸಕರು ಆಗಮಿಸುತ್ತಿದ್ದ ಸಂದರ್ಭ ಯುಕೊ ಸಂಘಟನೆ ವತಿಯಿಂದ, ಗೋಣಿಕೊಪ್ಪಲುವಿನಲ್ಲಿ ಶಾಸಕರ ಆಗಮನಕ್ಕಾಗಿ ಕಾಯುತ್ತಿದ್ದ ಯುಕೋ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಶಾಸಕರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸುವ ಮೂಲಕ ಶಾಸಕರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಭಾಷಿಕ ಅಲ್ಪಸಂಖ್ಯಾತರು ಹಾಗೂ ಅತ್ಯಂತ ವಿಶಿಷ್ಟ ಹಾಗೂ ಪುರಾತನ ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಕೊಡವ ಜನಾಂಗದವರ ದಶಕಗಳ ಬೇಡಿಕೆಯಾಗಿತ್ತು. ಚುನಾವಣೆ ಸಂದರ್ಭದಲ್ಲಿ ಶಾಸಕರು ತಾನು ಆಯ್ಕೆಯಾಗಿ ಬಂದ ಸಂದರ್ಭದಲ್ಲಿ ಇದನ್ನು ಸಾಧ್ಯವಾಗಿಸುವುದಾಗಿ ಭರವಸೆ ನೀಡಿದ್ದರು.

 ತಾವು ಕೊಟ್ಟ ಮಾತಿನಂತೆ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮೂಲಕ ಈ ಘೋಷಣೆಯನ್ನು ಮಾಡಿಸುವುದರೊಂದಿಗೆ ತಮ್ಮ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿದ ಪಟ್ಟಿಗೆ ಈ ಬೇಡಿಕೆಯೂ ಸೇರ್ಪಡೆಗೊಂಡು ಈಡೇರಿಸಿದಂತಾಯಿತು. ಕೊಡಗು ಜಿಲ್ಲಾಧ್ಯಂತ ಅದರಲ್ಲೂ ವಿಶೇಷವಾಗಿ ಕೊಡವ ಜನಾಂಗದವರು ಈ ಘೋಷಣೆಯನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿ ಆಚರಿಸುತ್ತಿದ್ದಾರೆ. ಮಾನ್ಯ ಶಾಸಕರೊಂದಿಗೆ ಯುಕೋ ಸಂಘಟನೆಯ ಅಧ್ಯಕ್ಷರಾದ ಮಂಜು ಚಿನ್ನಪ್ಪನವರನ್ನು ಸಹ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಸಹ ಉಪಸ್ಥಿತರಿದ್ದರು.