Kodagu

ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ‌ ಎಸ್.ಜೆ ಸೋಮಶೇಖರ್

admincoorgdaily

ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ‌ ಎಸ್.ಜೆ ಸೋಮಶೇಖರ್

ಮಡಿಕೇರಿ ಜು.16:-ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಹೇಳಿದರು.

 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ, ಜಿಲ್ಲಾ ಕಾರ್ಯಪಡೆ, ಸಲಹಾ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಟ್ಟುನಿಟ್ಟಾದ ಕಾನೂನು ಜಾರಿ, ಶಾಲಾ ದಾಖಲಾತಿ ಹೆಚ್ಚಳ ಮತ್ತು ಸಾರ್ವಜನಿಕರಲ್ಲಿ ಮೂಡಿದ ಜಾಗೃತಿಯಿಂದಾಗಿ ಈ ಪಿಡುಗು ಕಡಿಮೆಯಾಗಲು ಸಾಧ್ಯವಾಗಿದೆ. ಆದರೂ, ಗ್ರಾಮೀಣ ಪ್ರದೇಶಗಳಲ್ಲಿ, ಸಣ್ಣ ಕೈಗಾರಿಕೆಗೆ ಹಾಗೂ ಹೋಟೆಲ್, ತೋಟ, ರೆಸಾರ್ಟ್‍ಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡುವ ಮೂಲಕ ಸಂಪೂರ್ಣವಾಗಿ ನಿರ್ಮೂಲನೆಗೆ ಪಣತೊಡಬೇಕು. ಮಕ್ಕಳನ್ನು ದುಡಿಸಿಕೊಳ್ಳುವ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

 ಬಾಲ ಕಾರ್ಮಿಕರಾಗಿ ಕಂಡುಬರುವ ಮಕ್ಕಳನ್ನು ರಕ್ಷಿಸಿ, ಅವರ ಅಗತ್ಯನುಸಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಾಗೂ ಸರ್ಕಾರಿ ಬಾಲಮಂದಿರಗಳಲ್ಲಿ ಪುನರ್ವಸತಿಗಾಗಿ ನೇರವಾಗಿ ದಾಖಲಿಸಲು ಜಿಲ್ಲಾಧಿಕಾರಿ ಅವರು ತಿಳಿಸಿದರು.

 ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಪರಿಣಾಮಕಾರಿ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಲೈನ್‍ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಲೈನ್‍ಮನೆಗಳಲ್ಲಿ ಇರುವ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ವೇತನ ನೀಡಲಾಗುತ್ತಿಲ್ಲ ಎಂಬ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಅವುಗಳ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 ಮಡಿಕೇರಿ ವೃತ್ತದ ಕಾರ್ಮಿಕ ಅಧಿಕಾರಿ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡಿರುವ ಅನಿರೀಕ್ಷಿತ ದಾಳಿ ಹಾಗೂ ತಪಾಸಣೆ ಸಂದರ್ಭದಲ್ಲಿ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆ ಹಾಗೂ ತೋಟಗಳ ಮಾಲೀಕರುಗಳಿಗೆ ಜಾಗೃತಿ ಮೂಡಿಸಿ ಸ್ವಯಂ ಘೋಷಣಾ ಪತ್ರವನ್ನು ನೀಡಲಾಗುತ್ತಿದೆ. ಈಗಾಗಲೇ ಕೈಗೊಳ್ಳುತ್ತಿರುವ ತಪಾಸಣೆಗಳಲ್ಲಿ ಟಾಸ್ಕ್‍ಪೋರ್ಸ್ ತಂಡದ ಸದಸ್ಯರು ಜಂಟಿಯಾಗಿ ತಂಡದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಹಾಗೂ ಕುಶಾಲನಗರ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 7 ಮಕ್ಕಳು ಪತ್ತೆಯಾಗಿದ್ದು, ರಕ್ಷಿಸಲಾದ ಮಕ್ಕಳನ್ನು ಅಗತ್ಯ ಅನುಸಾರ ಅವರಿಗೆ ಪುನರ್ವಸತಿಗೊಳಿಸಲಾಗುತ್ತಿದೆ. ಗಿರಿಜನ ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ ಉಪಯೋಜನೆ ಅಡಿ ಅರ್ಹ ಮಕ್ಕಳಿಗೆ ಆಹಾರ ಹಾಗೂ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದರು.

 ಕಾಯ್ದೆಯ ಕಾಲಂ 16 ಹಾಗೂ 17ರ ಅಡಿ ನೇಮಕಗೊಂಡಿರುವ ಹೆಚ್ಚುವರಿ ನಿರೀಕ್ಷರುಗಳಿಗೆ ಹಾಗೂ ಪ್ರತಿನಿಧಿಗಳಿಗೆ, ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕಾರ್ಮಿಕ ನಿರೀಕ್ಷಕರು ಮಾಹಿತಿ ನೀಡಿದರು. 

 ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಯಕ್ಷಗಾನ ಕಾರ್ಯಕ್ರಮ, ಸನ್ ಬೋಡ್ರ್ಸ್ ಹಾಗೂ ಸ್ಟೀಕರ್ಸ್ ಮುದ್ರಣ, ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ಕಾರ್ಯಕ್ರಮ, ಕಾಯ್ದೆಯ ಮಾಹಿತಿಯನ್ನು ಒಳಗೊಂಡ ಕೈಪಿಡಿ(ಪುಸ್ತಕ)ಗಳ ವಿತರಣೆ ಕಾರ್ಯಕ್ರಮ ಮೂಲಕ ಸಾರ್ವಜನಿಕರಿಗೆ, ವಿವಿಧ ಸಂಸ್ಥೆಯ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು. 

ರಾಷ್ಟ್ರೀಯ ಯೋಜನಾ ಸಂಯೋಜಕರಾದ ರಂಜಿತ್ ಪ್ರಕಾಶ್ ಅವರು ಮಾತನಾಡಿ, ಮಾಹಿತಿ ಶಿಕ್ಷಣ ಮತ್ತು ಸಮೂಹದ ಮೂಲಕ ಸಾರ್ವಜನಿಕರಲ್ಲಿ ಹಾಗೂ ಮಾಲೀಕರಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು “ಚೈಲ್ಡ್ ಲೇಬರ್ ಪ್ಲಾಟ್ ಫಾರಂ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಡಿವೈಎಸ್‍ಪಿ ಪಿ.ಎ.ಸೂರಜ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ. ಆರ್.ಶೀರಾಝ್ ಅಹಮದ್, ವಿರಾಜಪೇಟೆ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕರಾದ ಮಾದಪ್ಪ, ಅಂಗವಿಕಲರ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎ.ಎಸ್.ದೀಪಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶೇಖರ್, ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್, ಪೆÇಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್‍ಇನ್ಸ್‍ಪೆಕ್ಟರ್ ಸುಮತಿ, ಓಡಿಪಿ ಸಂಸ್ಥೆಯ ವಲಯ ಸಂಯೋಜಕಿ ಜಾಯ್ಸ್ ಮೆನೆಜೆಸ್, ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.