ನಕಲಿ 2ನೇ ಪಿಯು ಪ್ರಶ್ನೆಪತ್ರಿಕೆ ಹರಿಬಿಟ್ಟು ವಂಚನೆ; ಯೂಟ್ಯೂಬ್ ಚಾನೆಲ್ ವಿರುದ್ಧ ಸೈಬರ್ ಕ್ರೈಂ ದೂರು

Jan 13, 2026 - 18:50
 0  461
ನಕಲಿ 2ನೇ ಪಿಯು ಪ್ರಶ್ನೆಪತ್ರಿಕೆ ಹರಿಬಿಟ್ಟು ವಂಚನೆ;  ಯೂಟ್ಯೂಬ್ ಚಾನೆಲ್ ವಿರುದ್ಧ ಸೈಬರ್ ಕ್ರೈಂ ದೂರು
Photo credit: TV09

ಬೆಂಗಳೂರು, ಜ.12: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ, ‘ಒರಿಜಿನಲ್ ಪ್ರಶ್ನೆಪತ್ರಿಕೆ’ ಎಂದು ಬಿಂಬಿಸಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹರಿಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಬೆಂಗಳೂರು ಉತ್ತರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಿಯು ಮಂಡಳಿ ತಯಾರಿಸಿದ ಪ್ರಶ್ನೆಪತ್ರಿಕೆಯ ಮಾದರಿಯನ್ನೇ ಅನುಕರಿಸಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಸೃಷ್ಟಿಸಿ, ಅವುಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಪ್ರಶ್ನೆಪತ್ರಿಕೆಗಳನ್ನು ‘ಇದೇ ಒರಿಜಿನಲ್’ ಎಂದು ಹೇಳಿ, ಅದರ ಪ್ರತಿಗಾಗಿ ಯೂಟ್ಯೂಬ್ ಚಾನೆಲ್ ಫಾಲೋ ಹಾಗೂ ಸಬ್‌ಸ್ಕ್ರೈಬ್ ಮಾಡುವಂತೆ ಪ್ರಚಾರ ನಡೆಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವೂ ಇದೆ.

ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಭ್ರಮೆ ಸೃಷ್ಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೆ ದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ನಕಲಿ ಪ್ರಶ್ನೆಪತ್ರಿಕೆ ಸೃಷ್ಟಿಸಿ ಹರಿಬಿಟ್ಟವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್ ಎಸ್., ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವರು ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ರೀತಿಯಲ್ಲಿ ಹರಡುತ್ತಿರುವ ಪ್ರಕರಣಗಳ ಮೇಲೂ ನಿಗಾ ವಹಿಸಲಾಗಿದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ; ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1