"ಕೊಡಗಿನ ತಂದೆ-ಮಗಳ ನಕಲಿ ನೇಮಕಾತಿ ವಂಚನೆ: ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ"
ಮಡಿಕೇರಿ, ಜು. 19: ನೇಮಕಾತಿಯ ನಕಲಿ ಆದೇಶ, ನಕಲಿ ಇ-ಮೇಲ್ ಐಡಿ ಮತ್ತು ನಕಲಿ ತರಬೇತಿ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚಿಸಿದ ಆರೋಪದಡಿ ಕೊಡಗು ಮೂಲದ ಪುತ್ರಿ ಮತ್ತು ಆಕೆಯ ತಂದೆಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ರದ್ದು ಕೋರಿ ಕೊಡಗು ಮೂಲದ ಶಂಶಾದ್ - ಬೇಗಂ ಮತ್ತು ಅವರ ತಂದೆ ಎಂ.ಎ ಮನ್ಸೂರ್ ಅಹ್ಮದ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಸಿಸಿಬಿ ಪರ ಹಾಜರಾಗಿದ್ದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್, 'ಅರ್ಜಿದಾರರು ತಾವು ಕಾಂಗ್ರೆಸ್ ಪಕ್ಷದ ನಾಯಕರೆಂದು ಬಿಂಬಿಸಿಕೊಳ್ಳುವ ಮೂಲಕ ಉದ್ಯೋಗಾಕಾಂಕ್ಷಿಗಳಿಂದ ಸುಮಾರು ರೂ. 5.3 ಕೋಟಿ ಸಂಗ್ರಹಿಸಿದ್ದಾರೆ ಎಂದರು. "ನಕಲಿ ನೇಮಕಾತಿ ಆದೇಶಗಳನ್ನು ನೀಡಿ ಅಂತಹ ಅಭ್ಯರ್ಥಿಗಳನ್ನು ಕೊಲ್ಕತ್ತ ಮತ್ತು ಮಹಾರಾಷ್ಟ್ರದಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ದೇಶಿಸಲಾಗಿದೆ.
ಇದಾದ ಬಳಿಕವೇ ಅಭ್ಯರ್ಥಿಗಳು ತಮ್ಮ ನೇಮಕಾತಿ ಮತ್ತು ತರಬೇತಿ ಕಾರ್ಯಕ್ರಮ ಕಾಲ್ಪನಿಕ ಎಂಬುದನ್ನು ಮನಗಂಡಿದ್ದಾರೆ. ಈ ದಿಸೆಯಲ್ಲಿ ಹಗರಣದ ಹಿಂದಿನ ಸೂತ್ರಧಾರಿಗಳು ಎಂಬ ಕಾರಣಕ್ಕೆ ಅರ್ಜಿದಾರರನ್ನು ಬಂಧಿಸಲಾಗಿತ್ತು' ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, 'ಆರೋಪಿಗಳ ಕಾರ್ಯಾಚರಣೆ ವಿಧಾನವನ್ನು ದೂರಿನಲ್ಲಿ ಸೂಕ್ಷ್ಮವಾಗಿ ವಿವರಿಸಲಾಗಿದೆ ಮತ್ತು ತನಿಖೆಗೆ ಸಮರ್ಥನೀಯವಾದ ಸಾಕಷ್ಟು ವಸ್ತುಗಳನ್ನು ಬಹಿರಂಗಪಡಿಸಿರುವುದು ಗಮನಾರ್ಹ' ಎಂಬುದನ್ನು ಆದೇಶದಲ್ಲಿ ಕಾಣಿಸಿತು.
“ಆರೋಪಗಳು ಕೇವಲ ಉದ್ಯೋಗದ ಭರವಸೆಗಳಿಗೆ ಸೀಮಿತ ವಾಗಿದ್ದರೆ, ವಿಷಯವನ್ನು ಬೇರೆಯದೇ ಆದ ನೆಲೆಗಟ್ಟಿನಲ್ಲಿ ನೋಡಬಹುದಿತ್ತು. ಆದರೆ, ನಕಲಿ ಇ-ಮೇಲ್ ಐಡಿಗಳನ್ನು ಸೃಷ್ಟಿಸುವುದು, ನಕಲಿ ನೇಮಕಾತಿ ಆದೇಶಗಳನ್ನು ನೀಡುವುದು, ಸರ್ಕಾರಿ ಇಲಾಖೆಗಳಿಗೆ ಎಂದು ಹೇಳಿ ಅಭ್ಯರ್ಥಿಗಳನ್ನು ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಕಳುಹಿಸಿರುವಂತಹ ಆರೋಪಗಳು ಪ್ರಾಥಮಿಕವಾಗಿ ಅನುಮಾನಾಸ್ಪದ ಆಗಿವೆ. ಉದ್ಯೋಗಾಕಾಂಕ್ಷಿಗಳನ್ನು ವಂಚಿಸುವ ದೊಡ್ಡ ಪಿತೂರಿಯನ್ನು ಬಹಿರಂಗ ಪಡಿಸಿವೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
