ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ತಂದೆಗೆ ಮರಣದಂಡನೆ

ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ತಂದೆಗೆ ಮರಣದಂಡನೆ

ತಿರುನಲ್ವೇಲಿ, ಜ.5: ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಯಾದ ತಂದೆಗೆ ಮರಣದಂಡನೆ ವಿಧಿಸಿದೆ.

ವಲಿಯೂರು ಸಮೀಪದ ಪಣಗುಡಿ ಪ್ರದೇಶದ ದಿನಗೂಲಿ ಕಾರ್ಮಿಕನಾಗಿರುವ ಆರೋಪಿ, ತನ್ನ ಎರಡನೇ ಪತ್ನಿಗೆ ಜನಿಸಿದ 14 ವರ್ಷದ ಮಗಳ ಮೇಲೆ 2024ರಿಂದ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯಾಯಾಲಯವು ನಿರ್ಧರಿಸಿದೆ. ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

2025ರ ಜನವರಿಯಲ್ಲಿ ಬಾಲಕಿಯ ದೇಹದಲ್ಲಿ ಕಂಡುಬಂದ ಬದಲಾವಣೆಗಳ ಹಿನ್ನೆಲೆಯಲ್ಲಿ ತಾಯಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಾಗ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಯಿತು. ಬಳಿಕ ನಡೆದ ವಿಚಾರಣೆಯಲ್ಲಿ, ತನ್ನ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಳು.

ಈ ಸಂಬಂಧ ತಾಯಿ ಫೆಬ್ರವರಿಯಲ್ಲಿ ವಲ್ಲಿಯೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಡಿಎನ್‌ಎ ಪರೀಕ್ಷೆ ಸೇರಿದಂತೆ ಅಗತ್ಯ ಪುರಾವೆಗಳನ್ನು ಸಂಗ್ರಹಿಸಿದ್ದರು. ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕಿಗೆ ಜನಿಸಿದ ಮಗುವಿನ ತಂದೆ ಆರೋಪಿಯೇ ಎಂಬುದು ದೃಢಪಟ್ಟಿತ್ತು.

ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಸುರೇಶ್ ಕುಮಾರ್, “ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವುದು ಅತ್ಯಂತ ಘೋರ ಅಪರಾಧ. ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಾದ ಅಗತ್ಯವಿದೆ” ಎಂದು ಹೇಳಿ, ಆರೋಪಿಗೆ ಮರಣದಂಡನೆ ವಿಧಿಸಿದರು.