ಡಿಜಿಟಲ್ ಅರೆಸ್ಟ್ ಭೀತಿಗೆ ಬಲಿಯಾದ ಮಹಿಳಾ ಟೆಕ್ಕಿ: ಫ್ಲಾಟ್‌, ಸೈಟ್ ಮಾರಾಟ ಮಾಡಿ ₹2 ಕೋಟಿ ನಷ್ಟ

ಡಿಜಿಟಲ್ ಅರೆಸ್ಟ್ ಭೀತಿಗೆ ಬಲಿಯಾದ ಮಹಿಳಾ ಟೆಕ್ಕಿ: ಫ್ಲಾಟ್‌, ಸೈಟ್ ಮಾರಾಟ ಮಾಡಿ ₹2 ಕೋಟಿ ನಷ್ಟ

ಬೆಂಗಳೂರು, ಡಿಸೆಂಬರ್ 16: ಸೈಬರ್ ವಂಚಕರ ‘ಡಿಜಿಟಲ್ ಅರೆಸ್ಟ್’ ಎಂಬ ನಕಲಿ ಭೀತಿಗೆ ಒಳಗಾದ ಮಹಿಳಾ ಟೆಕ್ಕಿಯೊಬ್ಬರು ಫ್ಲಾಟ್‌, ಸೈಟ್‌ಗಳನ್ನು ಮಾರಾಟ ಮಾಡಿದ್ದು, ಸಾಲ ಪಡೆದು ಒಟ್ಟು ಸುಮಾರು ₹2 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.

ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರ ನಿವಾಸಿಯಾದ ಸಾಫ್ಟ್‌ವೇರ್ ಉದ್ಯೋಗಿ, ತಮ್ಮ 10 ವರ್ಷದ ಮಗನೊಂದಿಗೆ ವಾಸವಾಗಿದ್ದು, ಕೆಲ ತಿಂಗಳ ಹಿಂದೆ ಬ್ಲೂ ಡಾರ್ಟ್ ಕೋರಿಯರ್ ಹೆಸರಿನಲ್ಲಿ ಬಂದ ದೂರವಾಣಿ ಕರೆ ಮೂಲಕ ವಂಚನೆಗೆ ಸಿಲುಕಿದ್ದಾರೆ. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ಮಹಿಳೆಯ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಅಕ್ರಮ ಬ್ಯಾಗೇಜ್ ಪತ್ತೆಯಾಗಿದೆ ಎಂದು ಹೇಳಿ ಆತಂಕ ಮೂಡಿಸಿದ್ದಾರೆ.

ನಂತರ ವಿಡಿಯೋ ಕರೆ ಮೂಲಕ ಮಾತನಾಡಿದ ವಂಚಕರು, ‘ವೆರಿಫಿಕೇಶನ್ ಮುಗಿಯುವವರೆಗೂ ಎಲ್ಲೂ ಹೋಗಬಾರದು. ನಾವು ಸೂಚಿಸುವ ಆ್ಯಪ್ ಅನ್ನು ಸ್ಥಾಪಿಸಿ ಹೇಳಿದಂತೆ ಹಣ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಸೂಚನೆಗಳನ್ನು ಪಾಲಿಸದಿದ್ದರೆ ಬಂಧನವಾಗುವುದರೊಂದಿಗೆ ಮಗನ ಭವಿಷ್ಯಕ್ಕೂ ತೊಂದರೆ ಉಂಟಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಭೀತಿಗೆ ಒಳಗಾದ ಮಹಿಳೆ, ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿ ಹೊಂದಿದ್ದ ಎರಡು ಸೈಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ವಿಜ್ಞಾನ ನಗರದಲ್ಲಿದ್ದ ಫ್ಲಾಟ್‌ನ್ನೂ ಮಾರಿದ್ದಾರೆ. ಜೊತೆಗೆ ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಪಡೆದು ಹಂತ ಹಂತವಾಗಿ ವಂಚಕರ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಒಟ್ಟು ಸುಮಾರು ₹2 ಕೋಟಿ ರೂ. ಹಣ ವರ್ಗಾವಣೆ ಮಾಡಿದ ಬಳಿಕ ವಂಚನೆಯ ಅನುಮಾನ ಬಂದ ಮಹಿಳೆ, ವೈಟ್‌ಫೀಲ್ಡ್ ಸಿಇಎನ್ (Cyber, Economic & Narcotics) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್, ‘ಡಿಜಿಟಲ್ ಅರೆಸ್ಟ್ ಎಂಬುದೇ ಇಲ್ಲ. ಯಾವುದೇ ಪೊಲೀಸರು ವಿಡಿಯೋ ಕರೆ ಮೂಲಕ ಬಂಧಿಸುವುದಿಲ್ಲ. ಇಂತಹ ಬೆದರಿಕೆ ಕರೆಗಳಿಗೆ ಸಾರ್ವಜನಿಕರು ಸ್ಪಂದಿಸಬಾರದು. ಇಂತಹ ಕರೆ ಬಂದ ತಕ್ಷಣವೇ 1930 ಸಹಾಯವಾಣಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದ್ದಾರೆ.