ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ಗೆ ಚಾಲನೆ
ಮಡಿಕೇರಿ: ಕಾಮನ್‌ವೆಲ್ತ್ ಗೇಮ್ಸ್ ದಿನಾಚರಣೆಯ ಅಂಗವಾಗಿ ನಗರದ ಸಾಯಿ ತರಭೇತಿ ಕೇಂದ್ರದಲ್ಲಿ ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ೭೫ನೇ ಆವೃತ್ತಿಗೆ ಹಿರಿಯ ಹಾಕಿ ಆಟಗಾರ್ತಿ ಸೀಮಾ.ಎ.ಪವಾರ್ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ೨೦೨೪ರ ಡಿ.೧೭ರಂದು ಪ್ರಧಾನಿ ಮೋದಿಯವರು ಆರಂಭಿಸಿದ ಈ ಚಳವಳಿ ದೇಶದಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ೭೪ ಆವೃತ್ತಿಗಳ ಮೂಲಕ ೩.೦೭ ಲಕ್ಷಕ್ಕೂ ಹೆಚ್ಚು ಸ್ಥಳಗಳಿಗೆ ತಲುಪಿದ್ದು, ೫೦ ಲಕ್ಷಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳನ್ನು ತೊಡಗಿಸಿಕೊಂಡಿದೆ.
ಯೋಗ, ಜುಂಬಾ, ರೋಪ್ ಸ್ಕಿಪ್ಪಿಂಗ್, ಮನರಂಜನಾ ಕ್ರೀಡೆಗಳ ಮೂಲಕ ಫಿಟ್ನೆಸ್ ಅನ್ನು ಎಲ್ಲರಿಗೂ ಸುಲಭವಾಗಿಸುವುದು ಇದರ ಗುರಿಯಾಗಿದೆ. ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಯುವಜನರಲ್ಲಿ ಚುರುಕು ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಫಿಟ್ ಇಂಡಿಯಾ ಚಳವಳಿಯ ಉದ್ದೇಶವನ್ನು ಬಲಪಡಿಸಿದೆ ಎಂದು ಫಿಟ್ನೆಸ್, ಶಿಸ್ತು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭ ಸುಮಾರು ೪೫ ವಿದ್ಯಾರ್ಥಿಗಳು ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಹಾಕಿ ತರಭೇತುದಾರರು ಮತ್ತು ಸಾಯಿ ತರಭೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಇದ್ದರು.
