ವಿರಾಜಪೇಟೆಯಲ್ಲಿ ಫಿಫಾ ವಿಶ್ವಕಪ್ ಆಟಗಾರರ ಫ್ಲೆಕ್ಸ್ ತೆರೆವು:ಲಿಜೇಶ್ ಖಂಡನೆ

Jun 19, 2026 - 10:55
Jun 20, 2026 - 01:09
 0  877
ವಿರಾಜಪೇಟೆಯಲ್ಲಿ ಫಿಫಾ ವಿಶ್ವಕಪ್ ಆಟಗಾರರ ಫ್ಲೆಕ್ಸ್ ತೆರೆವು:ಲಿಜೇಶ್ ಖಂಡನೆ

ವಿರಾಜಪೇಟೆ: ಪಟ್ಟಣದ ವಿವಿಧೆಡೆ ಫಿಫಾ ವಿಶ್ವಕಪ್ ಫುಟ್ಬಾಲ್ ಆಟಗಾರರಿಗೆ ಶುಭಕೋರಲು ಅಳವಡಿಸಿದ್ದ ಫ್ಲೆಕ್ಸ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ನೋಡಿ ತೆರವುಗೊಳಿಸಿರುವುದು ಖಂಡನೀಯವಾಗಿದ್ದು,ಪುರಸಭೆ ಮುಖ್ಯಾಧಿಕಾರಿಗಳ ಧೋರಣೆ ಕ್ರೀಡಾಪ್ರೇಮಿಗಳಿಗೆ ನೋವಾಗಿದೆ ಎಂದು ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್ ಅಮ್ಮತ್ತಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಕ್ರೀಡೆಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ.ಇದೀಗ ವಿಶ್ವದೆಲ್ಲೆಡೆ ಫಿಫಾ ವಿಶ್ವಕಪ್ ಫುಟ್ಬಾಲ್ ಹವಾ ಜೋರಾಗಿದೆ.ಭಾರತ ತಂಡ ವಿಶ್ವಕಪ್ ಫುಟ್ಬಾಲ್ ಗೆ ಅರ್ಹತೆ ಪಡೆದಿಲ್ಲ. ಜಿಲ್ಲೆಯ ಫುಟ್ಬಾಲ್ ಆಟಗಾರರು, ಕ್ರೀಡಾ ಪ್ರೇಮಿಗಳು ವಿವಿಧ ಭಾಗಗಳಲ್ಲಿ ತಮ್ಮ ನೆಚ್ಚಿನ ತಂಡಗಳಿಗೆ ಹಾಗೂ ಆಟಗಾರರಿಗೆ ಬೆಂಬಲ ಸೂಚಿಸಿ ಶುಭಕೋರುವ ಫ್ಲೆಕ್ಸ್ ಹಾಕಿದ್ದಾರೆ.ಆದರೆ ವಿರಾಜಪೇಟೆ ಪಟ್ಟಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹಾಕಿರುವ ವೀಡಿಯೋ ನೋಡಿ ಫ್ಲೆಕ್ಸ್ ತೆರವುಗೊಳಿಸಿರುವ ಕ್ರಮ ಸರಿಯಲ್ಲ.

ವೀಡಿಯೋದಲ್ಲಿ ಫ್ಲೆಕ್ಸ್ ಹಾಕಿದ್ದು ಹೇಸಿಗೆ ವಿಷಯ! ಎಂದು ಪ್ರಸ್ತಾಪಿಸಿದ್ದು ಇಡೀ ಜಿಲ್ಲೆಯ ಫುಟ್ಬಾಲ್ ಆಟಗಾರರು ಹಾಗೂ ಅಭಿಮಾನಿಗಳಿಗೆ ನೋವು ತಂದಿದೆ. ಯುವಕರು ಫುಟ್ಬಾಲ್ ಕ್ರೀಡೆಯತ್ತ ಹೆಚ್ಚು ಆಸಕ್ತಿ ತೋರಿದ್ದಾರೆ.ಯಾವುದೇ ರೀತಿಯ ಮುನ್ಸೂಚನೆ ನೀಡದೆ ಫ್ಲೆಕ್ಸ್ ತೆರವುಗೊಳಿಸಿರುವ ಕ್ರಮ ಸರಿಯಲ್ಲ. ವಿರಾಜಪೇಟೆ ಕ್ಷೇತ್ರದ ಶಾಸಕರು ಮಧ್ಯಪ್ರವೇಶಿಸಿ ಮತ್ತೆ ಅದೇ ಜಾಗದಲ್ಲಿ ಫ್ಲೆಕ್ಸ್ ಅಳವಡಿಸಲು ಅವಕಾಶ ನೀಡಬೇಕು.

ಕೊಡಗು ಜಿಲ್ಲೆಯ ಕೊಡಗು ಎಫ್.ಸಿ ಸೂಪರ್ ಡಿವಿಷನ್ ನಲ್ಲಿ ಭಾಗವಹಿಸುತ್ತಿದೆ.ಕೊಡಗಿನ ‌18 ವರ್ಷದ ಯುವಕ ತೇಜಸ್ ಬೋಪಣ್ಣ ಪೋರ್ಚುಗಲ್ ನ ಪ್ರತಿಷ್ಠಿತ ಕ್ಲಬ್ ಪರವಾಗಿ ಆಡುತ್ತಿದ್ದಾರೆ. ಕೊಡಗು ಜಿಲ್ಲೆಯ ಫುಟ್ಬಾಲ್ ಆಟಕ್ಕೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ.ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಬಾಂಧವರ,ಜನಾಂಗಗಳ ಫುಟ್ಬಾಲ್ ಪಂದ್ಯಾವಳಿ ಕೂಡ ಪ್ರತೀ ವರ್ಷ ನಡೆಯುತ್ತಿದೆ. ಫ್ಲೆಕ್ಸ್ ಅಳವಡಿಕೆ ಮಾಡಿದ್ದು ಹೇಸಿಗೆ ವಿಷಯ ಎಂದು ವೀಡಿಯೊದಲ್ಲಿ ಪ್ರಸ್ತಾಪ ಮಾಡಿದ್ದು,ಕೂಡಲೇ ಜಿಲ್ಲೆಯ ಫುಟ್ಬಾಲ್ ಆಟಗಾರರು ಹಾಗೂ ಕ್ರೀಡಾ ಪ್ರೇಮಿಗಳಿಗೆ ಕ್ಷಮೆ ಕೇಳಬೇಕೆಂದು ಲಿಜೇಶ್ ಅಮ್ಮತ್ತಿ ಒತ್ತಾಯಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0