ಜ.24 ರಿಂದ 26 ರವರೆಗೆ ರಾಜಾಸೀಟು ಉದ್ಯಾನವನದಲ್ಲಿ ಫ್ಲವರ್ ಶೋ

ಜ.24 ರಿಂದ 26 ರವರೆಗೆ ರಾಜಾಸೀಟು ಉದ್ಯಾನವನದಲ್ಲಿ  ಫ್ಲವರ್ ಶೋ

ಮಡಿಕೇರಿ:-ತೋಟಗಾರಿಕೆ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ, 24 ರಿಂದ 26 ರವರೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ. 

ಫಲಪುಷ್ಪ ಪ್ರದರ್ಶನದ ಉದ್ಘಾಟನೆಯು ಜನವರಿ, 24 ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ. ಜಿಲ್ಲೆಯ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 8 ಸಾವಿರ ಕುಂದಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್‍ಗಳಲ್ಲಿ ಸುಮಾರು 20 ಸಾವಿರ ವಿವಿಧ ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. 

ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು: ಕೊಡಗಿನ ಪ್ರಸಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನದ ಕಲಾಕೃತಿಯನ್ನು 33 ಅಡಿ ಎತ್ತರದಲ್ಲಿ 18 ಅಡಿ ಉದ್ದ, 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ.  

ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರಗಳ ಕಲಾಕೃತಿಗಳನ್ನು 2.5 ಅಡಿ ಮತ್ತು 2.0 ಅಡಿ ಎತ್ತರದಲ್ಲಿ ನಾಲ್ಕು ಕಲಾಕೃತಿಗಳು ಮತ್ತು 4.5 ಅಡಿ ಮತ್ತು 4.0 ಅಡಿ ಎತ್ತರದಲ್ಲಿ 2 ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು.

ಸಂಗೀತ ಕಲಾಕೃತಿಗಳಾದ 2 ಸಂಖ್ಯೆ ತಬಲಾ ಕಲಾಕೃತಿಯನ್ನು 2.5 ಅಡಿ ಎತ್ತರ ಮತ್ತು 3 ಅಡಿ ಎತ್ತರ ಕಲಾಕೃತಿಗಳು, ಪಿಯಾನೊ ಕಲಾಕೃತಿಯನ್ನು 5 ಅಡಿ ಎತ್ತರ, 4 ಅಡಿ ಅಗಲ ಮತ್ತು 3 ಅಡಿ ಉದ್ದದ ಕಲಾಕೃತಿಗಳು, ಹರ್ಪ್ ಕಲಾಕೃತಿಯನ್ನು 6 ಅಡಿ ಎತ್ತರ, 3 ಅಡಿ ಅಗಲ ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು.

ಗಣರಾಜ್ಯೋತ್ಸವದ ಅಂಗವಾಗಿ ಅಮರ್ ಜವಾನ್ ಕಲಾಕೃತಿಯನ್ನು 8 ಅಡಿ ಎತ್ತರದಲಿ ಕಲಾಕೃತಿಗಳನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ. 

ಹಾರುವ ಹಕ್ಕಿಯ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣವಾಗಲಿದೆ. ಮೀನಿನ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ನಿರ್ಮಾಣ ಮಾಡಲಾಗುವುದು. ಬಟರ್‍ಪ್ಲೈ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. ಹೂವಿನಿಂದ ಕರಡಿ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ. 

ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಬ್ಲೂವೇ, ಮಿಕ್ಕಿ ಮೌಸ್, ಡೊರೇಮ್ಯಾನ್ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗುವುದು.

ಹಾರ್ಟ್ ಶೇಪ್ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರು ಗಳ ಕಲಾಕೃತಿಗಳನ್ನು ಹಣ್ಣು/ ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆಯ ಪ್ರದರ್ಶನಗಳನ್ನು ಏರ್ಪಾಡಿಸಲಾಗುವುದು.

ಈ ರೀತಿಯಾಗಿ ಹದಿನಾರು ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 8 ರಿಂದ 10 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. 

ಗಾಂಧಿ ಮೈದಾನದಲ್ಲಿ 60 ಸಂಖ್ಯೆಯ ವಿವಿಧ ಇಲಾಖೆಗಳು, ಏಜೆನ್ಸಿಗಳು, ಸಂಸ್ಥೆಗಳು ಮಳಿಗೆಯನ್ನು ನಿರ್ಮಿಸಲಾಗುವುದು. ಇದರಲ್ಲಿ 10 ಮಳಿಗೆಯನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಫ್‍ಕಾಮ್ಸ್, ಕೈಗಾರಿಕೆ, ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. 

ರೈತರು ಬೆಳೆದಿರುವಂತಹ ವಿಶೇಷವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುವುದು. ಆಸಕ್ತರು ಜನವರಿ, 23 ರಿಂದಲೇ ತೋಟಗಾರಿಕೆ ಇಲಾಖೆಗೆ ಪ್ರದರ್ಶಿಕೆಗಳನ್ನು ತಂದು ಹೆಸರನ್ನು ನೋಂದಾಯಿಸಿಕೊಳ್ಳುವುದು.

ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುವುದು. ಆಸಕ್ತರು ಇಂದಿನಿಂದಲೇ ಅಥವಾ ನೇರವಾಗಿ ಜನವರಿ, 24 ರ ಬೆಳಗ್ಗೆ 8 ಗಂಟೆಗೆ ರಾಜಾಸೀಟು ಉದ್ಯಾನವನದಲ್ಲಿ (ದೂರವಾಣಿ ಸಂಖ್ಯೆ: 9448613355) ಹೆಸರನ್ನು ನೊಂದಾಯಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

       ಶಾಲೆಯಿಂದ ಶಾಲಾ ಸಮವಸ್ತ್ರದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ರಾಜಾಸೀಟು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.