ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ: ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಬಂಧನ
ಬಾಗಲಕೋಟೆ, ಡಿ. 17: ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಬಕವಿ–ಬನಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಸಂಬಂಧ ಡಿ.14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಪ್ರಕರಣವನ್ನು ಡಿ.15ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದನು.
ಆರೋಪಿಯ ಬಂಧನಕ್ಕಾಗಿ ಮಹಾಲಿಂಗಪುರ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಈ ಹಿನ್ನೆಲೆಯಲ್ಲಿ ಡಿ.17ರಂದು ಬೆಳಗಿನ ಜಾವ ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಮ್ಯೂಸಿಕ್ ಮೈಲಾರಿಯನ್ನು ಬಂಧಿಸಲಾಗಿದೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದು, ಮ್ಯೂಸಿಕ್ ಮೈಲಾರಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇತರ ಆರು ಜನರ ವಿರುದ್ಧ ಬೆದರಿಕೆ ಹಾಗೂ ಹಲ್ಲೆ ಸಂಬಂಧಿತ ಆರೋಪಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಬಂಧಿತ ಆರೋಪಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.
ಅಲ್ಲದೆ, ದೂರುದಾರಳ ಹೇಳಿಕೆ ದಾಖಲಿಸಿಕೊಂಡಿದ್ದು, ಸ್ಥಳ ಮಹಜರು ಹಾಗೂ ಪಂಚನಾಮೆ ಕಾರ್ಯ ಪೂರ್ಣಗೊಂಡಿದೆ. ಕಾಲ್‌ಡಿಟೇಲ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
What's Your Reaction?
Like
1
Dislike
2
Love
0
Funny
1
Angry
3
Sad
1
Wow
0
