ಪತ್ರಕರ್ತರ ಸೋಗಿನಲ್ಲಿ ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್ಗಳು ಅರೆಸ್ಟ್
admincoorgdaily

ಬೆಳಗಾವಿ: ಪತ್ರಕರ್ತರ ಸೋಗಿನಲ್ಲಿ ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಲವಂತವಾಗಿ ಗಾಂಜಾ ನೀಡಿ, ಬಳಿಕ ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇವೆ ಅಂತಾ ಹೆದರಿಸಿ, ಹಣ ವಸೂಲಿ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಹುಕ್ಕೇರಿ ಪಟ್ಟಣದ ಕಲ್ಲಪ್ಪ ಬಸವಣ್ಣಿ ಮಾಳಾಜ, ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಮಲ್ಲಿಕಾರ್ಜುನ ಸಿದ್ದಪ್ಪ ಜುಲಪಿ, ಮೂಲತಃ ಮಹಾರಾಷ್ಟ್ರದ ಸದ್ಯ ಹೊಸ ವಂಟಮೂರಿ ನಿವಾಸಿ ಪೃಥ್ವಿರಾಜ್ ನಾರಾಯಣ ಚವ್ಹಾಣ, ಬೆಳಗಾವಿ ಗಣೇಶಪುರದ ಡೇವಿಡ್ ಜಾಕೋಬ್ ತಂಗೇರಾಳ ಬಂಧಿತ ಆರೋಪಿಗಳು. ಈ ನಾಲ್ವರು ಯೂಟ್ಯೂಬರ್ಸ್ ಆಗಿದ್ದಾರೆ.
ಘಟನೆ ಹಿನ್ನೆಲೆ: ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಮೆಹಬೂಬ್ ಬಾಬುಸಾಬ್ ಜಮಾದಾರ್ ಅವರ ಬಳಿ ಜುಲೈ 18 ರಂದು ಕಾಕತಿ ಗ್ರಾಮದ ವ್ಯಕ್ತಿಯೊಬ್ಬ ಬಂದು, ಗಾಂಜಾ ಚೀಟಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ, 2 ಚೀಟಿ ಗಾಂಜಾ ನೀಡಿ 1 ಸಾವಿರ ರೂ. ಪಡೆದಿದ್ದ. ತಕ್ಷಣವೇ ಆತನ ಹಿಂಭಾಗದಿಂದ ಕಾರಿನಲ್ಲಿ ಬಂದ ನಾಲ್ವರು ಯೂಟ್ಯೂಬರ್ಗಳು ಮೆಹಬೂಬ್ ಅವರನ್ನು ಹತ್ತಿರದ ಕಬ್ಬಿನ ಗದ್ದೆಗೆ ಕರೆದೊಯ್ದು, "ನಾವು ಪತ್ರಕರ್ತರು, ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ" ಎಂದು ಬೆದರಿಸಿದ್ದಾರೆ. ಅವರ ಬಳಿ ಇದ್ದ ಗಾಂಜಾ ಚೀಟಿಗಳನ್ನು ಬಿಚ್ಚಿಸಿ ಫೋಟೊ ಹಾಗೂ ವಿಡಿಯೋ ಮಾಡಿದ್ದಾರೆ. ನಂತರ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು, ಹುಕ್ಕೇರಿ ಪೊಲೀಸ್ ಠಾಣೆಯ ಹತ್ತಿರ ಕರೆತಂದಿದ್ದಾರೆ, "ಠಾಣೆಗೆ ಕರೆದೊಯ್ದು ಕೇಸ್ ಹಾಕಿಸಿ ಹಿಂಡಲಗಾ ಜೈಲಿಗೆ ಕಳುಹಿಸಬೇಕೋ ಅಥವಾ ಹಣ ನೀಡಿ ಇಲ್ಲಿಯೇ ಪಾರಾಗ್ತಿಯಾ ಅಂತಾ ಬೆದರಿಸಿ 2-3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಅಂತಿಮವಾಗಿ ಮೆಹಬೂಬ್ ಅವರಿಂದ 60 ಸಾವಿರ ರೂ. ನಗದು ಸುಲಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ವಿಡಿಯೋವನ್ನು ಯೂಟ್ಯೂಬ್ ಚಾನಲ್ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಕುರಿತು ಮೆಹಬೂಬ್ ಜಮಾದಾರ್ ಅವರು ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಕೆ.ರಾಮರಾಜನ್ ಅವರು ಆರೋಪಿಗಳ ಪತ್ತೆಗೆ ಎಎಸ್ಪಿ ಆರ್.ಬಿ. ಬಸರಗಿ, ಗೋಕಾಕ್ ಡಿಎಸ್ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪಿಐ ಎಸ್.ಆರ್. ಗಣಾಚಾರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎನ್. ಮಸರಗುಪ್ಪಿ, ಎಂ.ಎಸ್. ಕಬ್ಬೂರ, ಆರ್.ಎಂ. ಪಡತಾರೆ ಮತ್ತು ಆರ್.ಯು. ಹನುಮನ್ನವರ ಅವರನ್ನೊಳಗೊಂಡ ತಂಡ ರಚಿಸಿದ್ದರು. ಈ ತಂಡವು ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದೆ. ಪ್ರಕರಣ ಬೇಧಿಸಿದ ಹುಕ್ಕೇರಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.
ಆರೋಪಿಗಳ ವಿರುದ್ಧ ಕಲಂ 319(2), 318(4), 140(2) ಹಾಗೂ 3(6) BNS ಅಡಿ ಪ್ರಕರಣ ದಾಖಲಾಗಿದೆ. ಕೃತ್ಯಕ್ಕೆ ಬಳಸಿದ ಒಂದು ಕಾರು, ಒಂದು ಬೈಕ್, 2 ಮೊಬೈಲ್ ಹಾಗೂ 34 ಸಾವಿರ ರೂ. ಹಣವನ್ನು ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹುಕ್ಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು, ಈ ರೀತಿ ಇನ್ನೂ ಯಾವೆಲ್ಲಾ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂಬ ಕುರಿತು ತನಿಖೆ ಕೈಗೊಂಡಿದ್ದಾರೆ.