ಲೈಕ್–ಫಾಲೋ ಮಾಡಿದರೆ ಪೂರ್ಣ ವಿಡಿಯೋ ಆಮಿಷ: 28 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಪ್ರಕರಣ

Dec 22, 2025 - 10:17
Dec 22, 2025 - 11:46
 0  445
ಲೈಕ್–ಫಾಲೋ ಮಾಡಿದರೆ ಪೂರ್ಣ ವಿಡಿಯೋ ಆಮಿಷ: 28 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಪ್ರಕರಣ

ಬೆಂಗಳೂರು, ಡಿ. 21: ‘ಪೂರ್ಣ ವಿಡಿಯೋ ಬೇಕಾದರೆ ಫಾಲೋ ಮಾಡಿ’ ಎಂಬ ಆಮಿಷವೊಡ್ಡಿ ಅಶ್ಲೀಲ ವಿಡಿಯೋ ತುಣುಕುಗಳು ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಖಾತೆಗಳ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ 28 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಲೈಕ್‌, ಕಾಮೆಂಟ್‌ ಹಾಗೂ ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೆಲವರು ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಶ್ಲೀಲ ವಿಷಯಗಳನ್ನು ಪೋಸ್ಟ್ ಮಾಡಿ, ಸಂಪೂರ್ಣ ವಿಡಿಯೋ ನೀಡುವ ನೆಪದಲ್ಲಿ ಬಳಕೆದಾರರನ್ನು ಫಾಲೋ ಮಾಡಲು ಪ್ರೇರೇಪಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿದ್ದವು.

ಈ ಕುರಿತು ಶ್ರೀಹರ್ಷ ಎಂಬವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ತನಿಖೆ ಆರಂಭಿಸಿರುವ ಪೊಲೀಸರು, ಸಂಬಂಧಿತ ಖಾತೆಗಳಲ್ಲಿ ಪ್ರಕಟಗೊಂಡಿರುವ ಪೋಸ್ಟ್‌ಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಹಾಕಿದವರ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಮನರಂಜನೆ ಮತ್ತು ಸಮಾಜದ ಉಪಯೋಗ ವಿಚಾರಗಳ ವಿನಿಮಯಕ್ಕೆ ಬಳಸಬೇಕಾದ ಸಾಮಾಜಿಕ ಜಾಲತಾಣವನ್ನು ಅಶ್ಲೀಲತೆ ಹಾಗೂ ಆಮಿಷಗಳಿಗೆ ಬಳಸುವುದು ಕಾನೂನುಬಾಹಿರ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲೈಕ್‌, ಕಾಮೆಂಟ್‌ ಮತ್ತು ಫಾಲೋವರ್ಸ್‌ ಗಾಗಿ ಇಂತಹ ಅಡ್ಡಮಾರ್ಗ ಅನುಸರಿಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 2
Sad Sad 0
Wow Wow 0