ಡ್ರಾಪ್ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ; 90 ಕಿಮೀ ವೇಗದಲ್ಲಿ ಕಾರಿನಿಂದ ಮಹಿಳೆಯನ್ನು ಹೊರಗೆಸೆದ ಕಾಮುಕರು! 

Dec 31, 2025 - 23:54
 0  2.2k
ಡ್ರಾಪ್ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ; 90 ಕಿಮೀ ವೇಗದಲ್ಲಿ ಕಾರಿನಿಂದ ಮಹಿಳೆಯನ್ನು ಹೊರಗೆಸೆದ ಕಾಮುಕರು! 
ಸಾಂದರ್ಭಿಕ ಚಿತ್ರ

ಫರಿದಾಬಾದ್, ಡಿ.31: ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ 25 ವರ್ಷದ ವಿವಾಹಿತ ಮಹಿಳೆಯನ್ನು ‘ಡ್ರಾಪ್’ ನೀಡುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದ ಇಬ್ಬರು ವ್ಯಕ್ತಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಅತಿ ವೇಗದಲ್ಲಿ ಸಾಗುತ್ತಿದ್ದ ಕಾರಿನಿಂದ ರಸ್ತೆ ಬದಿಗೆ ತಳ್ಳಿಹಾಕಿದ ಘಟನೆ ಡಿಸೆಂಬರ್‌ 29ರ ರಾತ್ರಿ ಫರಿದಾಬಾದ್‌ನಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಮಹಿಳೆಯನ್ನು ಗಮ್ಯಸ್ಥಾನದ ಬದಲು ಗುರುಗ್ರಾಮ್ ಕಡೆಗೆ ಕರೆದೊಯ್ದು ಕಾರಿನೊಳಗೇ ಅತ್ಯಾಚಾರ ಎಸಗಿದ್ದಾರೆ. ಬಳಿಕ ನಸುಕಿನಜಾವ ಸುಮಾರು 3 ಗಂಟೆ ವೇಳೆಗೆ ರಾಜಾ ಚೌಕ್ ಬಳಿ ಗಂಟೆಗೆ 90 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದ ಕಾರಿನಿಂದ ಆಕೆಯನ್ನು ಹೊರಗೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ಕಾರಿನಿಂದ ಬಿದ್ದ ಪರಿಣಾಮ ಮಹಿಳೆಯ ತಲೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿದ್ದು, 12ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಸಂತ್ರಸ್ತೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಸಹೋದರಿ ನೀಡಿದ ದೂರಿನಂತೆ, ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಂತ್ರಸ್ತೆ ಪೋಷಕರೊಂದಿಗೆ ವಾಸಿಸುತ್ತಿದ್ದರು. ಸೋಮವಾರ ಸಂಜೆ ಸ್ನೇಹಿತರ ಮನೆಗೆ ತೆರಳಿದ್ದ ಅವರು ತಡರಾತ್ರಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಮಧ್ಯರಾತ್ರಿ ಮಹಿಳೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಅವರನ್ನು ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗಳ ತೀವ್ರತೆಯನ್ನು ಗಮನಿಸಿ ವೈದ್ಯರು ದಿಲ್ಲಿಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದರೂ, ಫರಿದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯ ಸಹೋದರಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಮೂಲದವರಾಗಿದ್ದು, ಪ್ರಸ್ತುತ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯೊಂದಿಗೆ ಅವರಿಗೆ ಯಾವುದೇ ಪೂರ್ವ ಪರಿಚಯ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 4
Sad Sad 6
Wow Wow 0