ಮಾ.31 ರಂದು ಜನರಲ್ ತಿಮ್ಮಯ್ಯ ಅವರ 120ನೇ ವರ್ಷದ ಹುಟ್ಟುಹಬ್ಬ ಆಚರಣೆ

ಮಾ.31 ರಂದು ಜನರಲ್  ತಿಮ್ಮಯ್ಯ ಅವರ 120ನೇ ವರ್ಷದ ಹುಟ್ಟುಹಬ್ಬ ಆಚರಣೆ

ಮಡಿಕೇರಿ: ಮಾ.31 ರಂದು ಭಾರತೀಯ ಸೇನೆಯ ಮಹಾನ್ ಸೇನಾನಿ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಅವರ 120ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಎಫ್.ಎಂ.ಸಿ ಮತ್ತು ಜಿ.ಟಿ ಫೌಂಡೇಶನ್ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ ಎಂದು ಸಂಸ್ಥೆಯ ಸಂಚಾಲಕ ಪುತ್ತರಿರ ಪಪ್ಪು ತಿಮ್ಮಯ್ಯ ತಿಳಿಸಿದ್ದಾರೆ.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬ ಮತ್ತು ಪುಣ್ಯತಿಥಿಗಳನ್ನು ಸಮರ್ಪಕವಾಗಿ ಆಚರಿಸಲಾಗದೆ ಇರುವುದನ್ನು ಹಾಗೂ ಅವರ ಸ್ಮಾರಕಗಳ ದುಸ್ಥಿತಿಯನ್ನು ಗಮನಿಸಿ, ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ರವರು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಈ ಮಹಾನ್ ಸೇನಾನಿಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಆಯೋಜಿಸಲು ಸಮಾನ ಮನಸ್ಕರ ಸಮಿತಿಯೊಂದನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಮಹಾನ್ ಸೇನಾನಿಗಳ ಸ್ಮಾರಕಗಳ ನಿರ್ವಹಣೆ ಹಾಗೂ ಅವರ ಹುಟ್ಟುಹಬ್ಬ ಮತ್ತು ಪುಣ್ಯತಿಥಿಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಆಯೋಜಿಸಲು ತೀರ್ಮಾನಿಸಲಾಗಿದೆ. ಮಾ.31 ರಂದು ನಡೆಯುವ ಜನರಲ್ ತಿಮ್ಮಯ್ಯ ಅವರ 120ನೇ ವರ್ಷದ ಹುಟ್ಟುಹಬ್ಬವನ್ನು ಕೊಡಗಿನ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲು ಸಂಸ್ಥೆ ತೀರ್ಮಾನಿಸಿದ್ದು, ಈಗಾಗಲೇ ಸಿದ್ಧತೆಗಳು ಪ್ರಾರಂಭಗೊಂಡಿವೆ ಎಂದು ವಿವರಿಸಿದರು.

ಸಂಸ್ಥೆಯ ಅಧ್ಯಕ್ಷರಾಗಿ ಎ.ಎಸ್.ಪೊನ್ನಣ್ಣ ಅವರು ಕಾರ್ಯನಿರ್ವಹಿಸುತ್ತಿದ್ದು, ಗೌರವ ಸಂಚಾಲಕರಾಗಿ ಅಜ್ಜಿನಂಡ ತಮ್ಮು ಪೂವಯ್ಯ, ಸಂಚಾಲಕರಾಗಿ ಚೊಟ್ಟೆಯಂಡ ಸಂಜು 1 ಕಾವೇರಪ್ಪ ಹಾಗೂ ಪುತ್ತರೀರ ಪಪ್ಪು ತಿಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ, ಸಹ ಸಂಚಾಲಕರಾಗಿ ಪಾಲೆಂಗಡ ಅಮಿತ್ ಭೀಮಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಚೋಕಿರ ಅನಿತಾ ಪ್ರವೀಣ, ಚೇಯ್ಯಂಡ ಸತ್ಯ, ತೇಲಪಂಡ ಸುಬ್ಬಯ್ಯ ಹಾಗೂ ಚಂಗಂಡ ಸೂರಜ್ ತಮ್ಮಯ್ಯ ಅವರುಗಳು ಸಮಿತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಚೊಟ್ಟೆಯಂಡ ಸಂಜು ಕಾವೇರಪ್ಪ, ಸಂಸ್ಥೆಯ ಸಹ ಸಂಚಾಲಕರಾದ ತೇಲಪಂಡ ಸುಬ್ಬಯ್ಯ, ಚಂಗಂಡ ಸೂರಜ್ ತಮ್ಮಯ್ಯ ಇದ್ದರು.