ವಿದ್ಯಾರ್ಥಿನಿಲಯದಲ್ಲೇ ಬಾಲಕಿ ಹೆರಿಗೆ

Nov 26, 2025 - 21:13
 0  2.6k
ವಿದ್ಯಾರ್ಥಿನಿಲಯದಲ್ಲೇ ಬಾಲಕಿ ಹೆರಿಗೆ
Photo credit: TV09

ಕೊಪ್ಪಳ, ನ.26: ಕುಕನೂರು ತಾಲೂಕಿನ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿದ್ದ ಹತ್ತನೇ ತರಗತಿ ಬಾಲಕಿ ವಸತಿನಿಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಕಳುಹಿಸಿದೆ.

ಆಯೋಗದ ಅಧ್ಯಕ್ಷರು ರವಾನಿಸಿದ ಪತ್ರದಲ್ಲಿ, ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಮೂರು ದಿನಗಳೊಳಗೆ ಸಲ್ಲಿಸಲು ಸೂಚಿಸಲಾಗಿದೆ. ವಸತಿನಿಲಯದ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ ಕೂಡ ಕೇಳಿ ಬಂದಿದ್ದು, ಆಯೋಗವು ಈ ಅಂಶವನ್ನೂ ತೀವ್ರವಾಗಿ ಪರಿಶೀಲಿಸಲು ಸೂಚಿಸಿದೆ.

ಹಠಾತ್ತನೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ–ಮಗು ಇಬ್ಬರೂ ಸುರಕ್ಷಿತರಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣನಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ವಸತಿನಿಲಯದ ವಾರ್ಡನ್‌ರನ್ನು ಅಮಾನತುಗೊಳಿಸಿರುವುದಾಗಿ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಆಸ್ಪತ್ರೆ ಭೇಟಿ ನೀಡಿ ಬಾಲಕಿ ಮತ್ತು ನವಜಾತ ಶಿಶುವಿನ ಆರೋಗ್ಯ ವಿಚಾರಿಸಿದ್ದಾರೆ. ವಸತಿನಿಲಯದಲ್ಲಿ ಮೇಲ್ವಿಚಾರಣೆಯ ಕೊರತೆ ಗಂಭೀರವಾಗಿದೆಯೇ ಎಂಬುದರ ಕುರಿತು ಪ್ರಾಥಮಿಕ ಪರಿಶೀಲನೆ ಕೈಗೊಳ್ಳಲಾಗಿದೆ.

What's Your Reaction?

Like Like 3
Dislike Dislike 2
Love Love 1
Funny Funny 1
Angry Angry 2
Sad Sad 12
Wow Wow 0