ಗೋಣಿಕೊಪ್ಪ: 500 ಮೀಟರ್ ಉದ್ದದ ತಿರಂಗ ಯಾತ್ರೆ

Aug 14, 2026 - 21:20
 0  108
ಗೋಣಿಕೊಪ್ಪ: 500 ಮೀಟರ್ ಉದ್ದದ ತಿರಂಗ ಯಾತ್ರೆ

ಗೋಣಿಕೊಪ್ಪ;80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಾಗೂ "ವಂದೇ ಮಾತರಂ" ಗೀತೆಯ 150ನೇ ವರ್ಷದ ಸಂಭ್ರಮದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವಿರಾಜಪೇಟೆ ಮಂಡಲದ ವತಿಯಿಂದ ಗೋಣಿಕೊಪ್ಪದಲ್ಲಿ 500 ಮೀಟರ್ ಉದ್ದದ ಬೃಹತ್ ತಿರಂಗ ಯಾತ್ರೆ ನಡೆಯಿತು.

ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಶ್ರೀ ಉಮಾಮಹೇಶ್ವರಿ ದೇವಸ್ಥಾನದವರೆಗೆ ನಡೆದ ಯಾತ್ರೆಗೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಸೈನಿಕರು ಸೇರಿದಂತೆ ಪ್ರಮುಖರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಗೋಣಿಕೊಪ್ಪ ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅತ್ಯುತ್ಸಾಹದಿಂದ ಯಾತ್ರೆಯಲ್ಲಿ ಪಾಲ್ಗೊಂಡರು. ರಾಷ್ಟ್ರಭಕ್ತಿಯ ಘೋಷಣೆಗಳೊಂದಿಗೆ ಸುಮಾರು 2 ಕಿ.ಮೀ ಸಾಗಿದ ತಿರಂಗ ಯಾತ್ರೆ ನಗರದಲ್ಲಿ ಗಮನಸೆಳೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, "ನಮ್ಮ ದೇಶವನ್ನು ನಾವು ಪ್ರೀತಿಸುತ್ತೇವೆ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಭಕ್ತಿ ನಮ್ಮಲ್ಲಿ ಸದಾ ಚಿಮ್ಮುತ್ತಿರಬೇಕು. ದೇಶವನ್ನು ಕಟ್ಟುವಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭಾರತದ ಗಟ್ಟಿತನವನ್ನು ಜಗತ್ತಿಗೆ ತೋರಿಸಿ, ಭಾರತವನ್ನು ಮಾದರಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ನಿಭಾಯಿಸಬೇಕು" ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, "ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸರ್ಕಾರಿ ಇಲಾಖೆಗಳ ಮಟ್ಟಕ್ಕೆ ಸೀಮಿತವಾಗಿತ್ತು. ಇದೀಗ ಅದನ್ನು ಜನರ ಬಳಿಗೆ ಕೊಂಡೊಯ್ದು ದೇಶಭಕ್ತಿಯ ಭಾವನೆ ಮೂಡಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ತಿರಂಗ ಯಾತ್ರೆ ಹಾಗೂ ಮನೆಮನೆಗಳಲ್ಲಿ ತಿರಂಗ ಹಾರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ" ಎಂದರು.

ದೇಶವನ್ನು ಮತ್ತಷ್ಟು ಸಮೃದ್ಧವಾಗಿ ಕಟ್ಟುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರ ನಿರ್ಮಾಣದ ಶಕ್ತಿಯನ್ನು ಯುವಜನತೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

 ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಸ್ವಾತಂತ್ರ್ಯೋತ್ಸವದ ಸಂಭ್ರಮದ ಜತೆಗೆ ದೇಶ ವಿಭಜನೆಯ ನೋವನ್ನು ಕೂಡ ನೆನಪಿಸಿಕೊಳ್ಳಬೇಕಾಗಿದೆ. ದೇಶದ ಅಂಗಾಂಗ ಕಳಚಿಕೊಂಡ ನೋವು ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ಕಾರ್ಯದರ್ಶಿ ನೆಲ್ಲೀರ ಚಲನ್‌ಕುಮಾರ್, ಪ್ರಮುಖರಾದ ಮಾಚಿಮಾಡ ರವೀಂದ್ರ, ಮಾಪಂಗಡ ಯಮುನಾ ಚಂಗಪ್ಪ, ಪಟ್ಟಡ ರೀನಾ ಪ್ರಕಾಶ್, ಮೂಕಳೇರ ಕಾವ್ಯ ಮಧು, ಕುಲ್ಲಚಂಡ ಬೋಪಣ್ಣ, ನಿತಿನ್ ಮೊಣ್ಣಪ್ಪ, ಸೋಮವಾರಪೇಟೆ ಅಧ್ಯಕ್ಷ ಮಹೇಶ್, ಪಟ್ಟಡ ರಂಜಿ, ಕಿಶನ್ ಪೂವಯ್ಯ, ರಾಕೇಶ್, ಸಂಪತ್, ಮುದ್ದಿಯಡ ಮಂಜು, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0