Kodagu

ಗೋಣಿಕೊಪ್ಪ: ಕೆಪಿಎಸ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

admincoorgdaily

ಗೋಣಿಕೊಪ್ಪ: ಕೆಪಿಎಸ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಗೋಣಿಕೊಪ್ಪ: 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಧ್ವಜಾರೋಹಣ ನೆರವೇರಿಸಿದರು.

ನಂತರ ವಿದ್ಯಾರ್ಥಿಗಳು ಶಾಲೆಯಿಂದ ಪೊನ್ನಂಪೇಟೆ ರಸ್ತೆ ತಿರುವಿನವರೆಗೆ ಮೆರವಣಿಗೆ ನಡೆಸಿದರು. ದೇಶಭಕ್ತಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ದೇಶಾಭಿಮಾನ ಮೂಡಿಸಿದರು.

ಶಾಲೆಯ ವಿವೇಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿ ಸ್ವಾತಂತ್ರ್ಯ ಹೋರಾಟ ಹಾಗೂ ದೇಶಪ್ರೇಮದ ಮಹತ್ವವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪ್ರಮೋದ್ ಕಾಮತ್ ಮಾತನಾಡಿ, ದೇಶ ಕಟ್ಟಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಮಹತ್ವದ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ಹೋರಾಟಗಳನ್ನು ತಿಳಿದುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಹೋರಾಟಗಾರರು ದೇಶಕ್ಕಾಗಿ ನೀಡಿದ ಕೊಡುಗೆಯ ಫಲವನ್ನು ಇಂದಿನ ಪೀಳಿಗೆ ಮುಂದುವರಿಸಬೇಕು. ತ್ಯಾಗ ಮತ್ತು ಬಲಿದಾನದ ಮೂಲಕ ಭಾರತ ಬ್ರಿಟಿಷರ ಬಂಧನದಿಂದ ಮುಕ್ತವಾಗಿದೆ. ಆದ್ದರಿಂದ ಸ್ವಾತಂತ್ರ್ಯೋತ್ಸವ ನಮ್ಮೆಲ್ಲರ ಸಂಭ್ರಮದ ಹಬ್ಬವಾಗಿದೆ ಎಂದರು.

ನಿವೃತ್ತ ಸೈನಿಕ ಮಣಿಕಂಠ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಂಡು ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು. ತಮ್ಮ ಸ್ವಂತ ಸುಖ, ಸಂತೋಷಗಳನ್ನು ತ್ಯಾಗ ಮಾಡಿ ದೇಶ ಕಟ್ಟಿಕೊಟ್ಟವರ ಆದರ್ಶಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು. ಅದರ ಮುಂದುವರಿದ ಭಾಗವಾಗಿ ಇಂದು ಸೈನಿಕರು ಗಡಿಯಲ್ಲಿ ದೇಶ ಕಾಯುತ್ತಿದ್ದಾರೆ. ಇಂತಹ ಮಹತ್ವದ ಸೇವೆಯತ್ತ ವಿದ್ಯಾರ್ಥಿಗಳ ಮನಸ್ಸು ಕೂಡ ಹರಿಯಬೇಕು ಎಂದು ಸಲಹೆ ನೀಡಿದರು.

ಶಾಲೆಯ ಶಿಕ್ಷಕ ಸಿದ್ದರಾಜು ಮಾತನಾಡಿ, ಸ್ವಾತಂತ್ರ್ಯವನ್ನು ಭಾರತ ಸುಲಭವಾಗಿ ಪಡೆದಿಲ್ಲ. ಬ್ರಿಟಿಷರ ದಾಸ್ಯದಿಂದ ಮುಕ್ತಿಯಾಗಲು ಹಲವಾರು ಹೋರಾಟ ಹಾಗೂ ಸತ್ಯಾಗ್ರಹಗಳನ್ನು ನಡೆಸಲಾಗಿದೆ. ಸ್ವಾತಂತ್ರ್ಯ ಬಂದಿದ್ದರೂ ಸಾಮಾಜಿಕ ಬದ್ಧತೆ ಮತ್ತು ಮೂಲಸೌಲಭ್ಯಗಳ ಕೊರತೆಯಿಂದ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಂಪೂರ್ಣ ಸ್ವಾತಂತ್ರ್ಯದ ಅನುಭವ ಸಿಗಬೇಕಿದೆ. ಪ್ರತಿಯೊಬ್ಬರೂ ಸಮೃದ್ಧ ಜೀವನ ಕಟ್ಟಿಕೊಳ್ಳುವ ವ್ಯವಸ್ಥೆ ರೂಪುಗೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸ್ವಾತಂತ್ರ್ಯೋತ್ಸವದ ಆಚರಣೆಗೆ ಅರ್ಥ ನೀಡಬೇಕು ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಗದೀಶ್ ಜೋಡುಬೀಟಿ, ದೇಶದ ಸ್ವಾತಂತ್ರ್ಯ ಹೋರಾಟದ ವಿಚಾರಗಳು ನಮ್ಮನ್ನು ಭಾವನಾತ್ಮಕವಾಗಿ ಕಾಡುತ್ತವೆ. ಪ್ರತಿಯೊಬ್ಬ ಹೋರಾಟಗಾರರ ಬದುಕು ಮತ್ತು ಹೋರಾಟವನ್ನು ತಿಳಿದುಕೊಂಡಾಗ ದೇಶಪ್ರೇಮ ಮತ್ತಷ್ಟು ಹೆಚ್ಚುತ್ತದೆ. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ದೇಶವನ್ನೇ ಆಳುವ ಮಟ್ಟಕ್ಕೆ ವಿದೇಶಿಗರು ಬೆಳೆದಿದ್ದಕ್ಕೆ ದೇಶದ ಬಹುತೇಕ ಜನರು ಶಿಕ್ಷಣದಿಂದ ಹೊರಗುಳಿದಿದ್ದುದೂ ಒಂದು ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ನಮ್ಮತನ ಹಾಗೂ ದೇಶವನ್ನು ಉಳಿಸಿಕೊಂಡು ಬದುಕುವಂತಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಶಾಲೆಯ ಹಿರಿಯ ಶಿಕ್ಷಕರುಗಳಾದ ದಮಯಂತಿ, ಇಂದಿರಾಗ್ರಾಪಂ ಮಾಜಿ ಸದಸ್ಯೆ ಗೀತಾ, ರೋಟರಿ ಸಂಸ್ಥೆಯ ಪ್ರಮುಖರಾದ ನವೀನ್ ಹಾಗೂ ಸುಮಿ ಸುಬ್ಬಯ್ಯ, ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಭಾಕರ್ ನೆಲ್ಲಿತ್ತಾಯ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು.