ಗೋಣಿಕೊಪ್ಪ:ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Jul 26, 2026 - 17:30
 0  55
ಗೋಣಿಕೊಪ್ಪ:ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಪೊನ್ನಂಪೇಟೆ, ಜು. 26: ಕಾರ್ಗಿಲ್ ಯುದ್ಧದಲ್ಲಿ ಭಾರತ ಸಾಧಿಸಿದ ಐತಿಹಾಸಿಕ ವಿಜಯದ ಸ್ಮರಣಾರ್ಥ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಭಾನುವಾರದಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ದೇಶದ ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ಶೌರ್ಯವನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಮಾತೃಭೂಮಿಗಾಗಿ ಜೀವ ತ್ಯಾಗ ಮಾಡಿದ ಯೋಧರ ಸಾಹಸ, ತ್ಯಾಗ ಮತ್ತು ದೇಶಪ್ರೇಮ ಇಂದಿನ ಯುವಜನತೆಗೆ ಸದಾ ಸ್ಫೂರ್ತಿದಾಯಕವಾಗಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ದುಷ್ಟಶಕ್ತಿಗಳು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ವಿದ್ಯಾರ್ಥಿಗಳು ಇಂತಹ ಪ್ರಚೋದನೆಗಳಿಗೆ ಒಳಗಾಗದೆ ಜಾಗೃತರಾಗಿರಬೇಕು. ದೇಶದ ಗಡಿಯಲ್ಲಿ ಶತ್ರುಗಳನ್ನು ಎದುರಿಸುವ ಸೈನಿಕರಂತೆ, ಯುವಜನತೆ ತಮ್ಮ ಬದುಕನ್ನು ಹಾಳು ಮಾಡುತ್ತಿರುವ ಮಾದಕವಸ್ತು ಎಂಬ ಸಾಮಾಜಿಕ ಶತ್ರುವಿನ ವಿರುದ್ಧ ಹೋರಾಡಬೇಕು. ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತದ ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ಹಗಲಿರುಳು ದೇಶವನ್ನು ಕಾಪಾಡುತ್ತಿರುವ ಸೈನಿಕರ ಸೇವೆಯಿಂದಲೇ ನಾವು ಇಂದು ಸುರಕ್ಷಿತ ಜೀವನ ನಡೆಸುತ್ತಿದ್ದೇವೆ. ದೇಶಕ್ಕಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ಗೌರವ ಸಲ್ಲಿಸುವ ಜೊತೆಗೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರ ಬಗ್ಗೆ ಸದಾ ಕೃತಜ್ಞತೆಯ ಮನೋಭಾವ ಹೊಂದಿರಬೇಕು ಎಂದು ಹೇಳಿದರು.

 ಗೋಣಿಕೊಪ್ಪಲಿನ ಹಿರಿಯ ವೈದ್ಯರಾದ ಡಾ. ಕಾಳಿಮಾಡ ಶಿವಪ್ಪ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕಾರ್ಗಿಲ್ ವೀರ ಯೋಧರಿಗೆ ಭಾವಪೂರ್ಣ ಗೌರವ ಸಲ್ಲಿಸಿದರು.

 ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಕಾರ್ಗಿಲ್ ವಿಜಯವು ವಿಶ್ವದ ಮುಂದೆ ಭಾರತದ ಸಾಮರ್ಥ್ಯ, ಧೈರ್ಯ ಮತ್ತು ಸೇನಾ ಶಕ್ತಿಯನ್ನು ಪರಿಚಯಿಸಿತು. ಈ ವಿಜಯ ಯುವಕರಲ್ಲಿ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸಿದ ಐತಿಹಾಸಿಕ ಕ್ಷಣವಾಗಿದೆ. ವೀರ ಯೋಧರನ್ನು ಆದರ್ಶವಾಗಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಕಾಲೇಜಿನ ಗ್ರಂಥಪಾಲಕ ಡಾ. ಸಂತೋಷ್ ಚೌಹಾಣ್, ಎನ್‌ಸಿಸಿ ಅಧಿಕಾರಿಗಳಾದ ಡಾ. ಲೆಫ್ಟಿನೆಂಟ್ ಎಂ.ಆರ್. ಆಕ್ರಂ ಹಾಗೂ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಎನ್‌ಸಿಸಿ ಕೆಡೆಟ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0