ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಸರಕಾರ : ಸೋಮವಾರಪೇಟೆ ಬಿಜೆಪಿ ಅಸಮಾಧಾನ

Jul 20, 2026 - 22:09
 0  216
ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಸರಕಾರ : ಸೋಮವಾರಪೇಟೆ ಬಿಜೆಪಿ ಅಸಮಾಧಾನ

ಮಡಿಕೇರಿ ಜು.20 : ಅನುದಾನದ ಕೊರತೆಯಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗದ ಸರಕಾರ ಇದೀಗ ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಮೂಲಕ ರಾಜ್ಯದ ಜನತೆಗೆ ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಕ್ಕೆ ಬರಬೇಕೆನ್ನುವ ಏಕೈಕ ಉದ್ದೇಶದಿಂದ ಆರ್ಥಿಕ ಹೊರೆಯ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಇದೀಗ ಹಣ ಕ್ರೋಢೀಕರಣಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದೆ. ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ನೀಡಲಾಗದೆ ಪರದಾಡುತ್ತಿರುವ ರಾಜ್ಯ ಸರಕಾರ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಕಾಲಹರಣ ಮಾಡುತ್ತಿದೆ. ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಬಡವರು ಹಾಗೂ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತ್ಯಾತೀತ ಸಿದ್ಧಾಂತದ ಆದರ್ಶಗಳ ಮುಖವಾಡ ತೊಟ್ಟಿರುವ ಕಾಂಗ್ರೆಸ್ ಸರಕಾರ ಪಡಿತರ ಚೀಟಿಯಲ್ಲೂ ಜಾತಿಯನ್ನು ಹುಡುಕುತ್ತಿದೆ ಎಂದು ಟೀಕಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸರಕಾರ ಸೌಲಭ್ಯ ನೀಡದೆ ವಂಚಿಸುತ್ತಿದೆ. ಅನರ್ಹರನ್ನು ಹೊರಗಿಡುವ ನೆಪವೊಡ್ಡಿ ದಾಖಲೆಗಳ ಪರಿಷ್ಕರಣೆಗೆ ಮುಂದಾಗಿರುವ ಸರಕಾರ ಕಾಲಹರಣ ಮಾಡುವ ಮೂಲಕ ಅರ್ಹರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ಪರದಾಡುತ್ತಿರುವ ಸರಕಾರ ಜನರಲ್ಲಿ ಗೊಂದಲ ಸೃಷ್ಟಿಸಿ ಉಳಿದಿರುವ ಎರಡು ವರ್ಷಗಳ ಅಧಿಕಾರವಧಿಯನ್ನು ತರಾತುರಿಯಲ್ಲಿ ಮುಗಿಸುವ ಯೋಜನೆ ರೂಪಿಸಿದಂತ್ತಿದೆ ಎಂದು ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.

ಸರಕಾರದ ನಿರ್ಲಕ್ಷ್ಯದಿಂದ ರಸ್ತೆಗಳೆಲ್ಲವೂ ಗುಂಡಿಮಯವಾಗಿದ್ದು, ವಾಹನ ಸವಾರರು ಮಾತ್ರವಲ್ಲದೆ ಪಾದಾಚಾರಿಗಳಿಗೂ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಸರಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ತಮಾಷೆ ನೋಡುವ ಬದಲು ರಸ್ತೆಗಳ ಅಭಿವೃದ್ಧಿಗೆ ಮೊದಲು ಅನುದಾನ ಬಿಡುಗಡೆ ಮಾಡಲಿ. ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಪಡೆಯುವ ಆದೇಶವನ್ನು ಹಿಂದಕ್ಕೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0