ಗೌರಿಕೆರೆ ಪ್ರಕರಣ: ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ, "ಕಲ್ಲು ಬಂಡೆ ಹೊಡೆಯದಂತೆ ಮೊದಲೇ ಸೂಚಿಸಿದ್ದೆವು
ವಿರಾಜಪೇಟೆ:ವಿರಾಜಪೇಟೆ ಸಮೀಪದ ಗೌರಿಕೆರೆಯಲ್ಲಿ ಅಕ್ರಮ ಕಾಮಗಾರಿಯಿಂದ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸದಂತೆ ಸೂಚಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮಾಹಿತಿ ನೀಡಿದರು.
ತಡೆಗೋಡೆ ಕುಸಿತಗೊಂಡ ಸ್ಥಳಕ್ಕೆ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಅವರು ಅಧಿಕಾರಿಗಳ ತಂಡದೊಂದಿಗೆ ಹಾಗೂ ಸ್ಥಳದ ಮಾಲೀಕರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಘಟನೆ ನಡೆದ ಕೂಡಲೇ ನಮಗೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಅಕ್ರಮವಾಗಿ ಕಲ್ಲು ಬಂಡೆಗಳನ್ನು ಹೊಡೆಯುತ್ತಿದ್ದ ಕಾರಣ ಕೂಡಲೇ ಕೆಲಸ ನಿಲ್ಲಿಸುವಂತೆ ಖಡಕ್ ಸೂಚನೆ ನೀಡಲಾಗಿತ್ತು.
ಬಳಿಕ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಅದರ ನಡುವೆ ಮಳೆಯಾದ್ದರಿಂದ ಆ ಜಾಗದಲ್ಲಿ ನೀರು ತುಂಬಿಕೊಂಡು ಸ್ಥಳೀಯರಿಗೆ ಆತಂಕ ಉಂಟಾಗಿದ್ದಲ್ಲದೆ ಶಾಲಿನಿ ಎಂಬುವವರ ತಡೆಗೋಡೆ ಅಲ್ಪ ಪ್ರಮಾಣದಲ್ಲಿ ಕುಸಿತಗೊಂಡು ಅಲ್ಲಿ ಅಪಾಯ ಉಂಟಾಗುವ ಸಂಭವ ಇದ್ದುದರಿಂದ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದೇವು. ಆದರೆ ಶಾಲಿನಿ ಅವರ ತಡೆಗೋಡೆಗೆ ಪರಿಹಾರ ಕ್ರಮವನ್ನು ತೆಗೆದುಕೊಳ್ಳಲು ಜಾಗದ ಮಾಲೀಕರನ್ನು ಪತ್ತೆಹಚ್ಚುವುದು ನಮಗೆ ದೊಡ್ಡ ಸವಾಲೇ ಆಗಿತ್ತು ಎಂದು ಎಂದು ಮುಖ್ಯಾಧಿಕಾರಿ ವಿವರಿಸಿದರು.
ಈ ಹಿಂದೆ ಆ ಜಾಗವನ್ನು ತೆಗೆದುಕೊಂಡಿದ್ದ ಮಾಲೀಕರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದ್ದ ಸಂದರ್ಭ ಅವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರಲ್ಲದೆ ಆ ಜಾಗವನ್ನು ಪಡೆದುಕೊಂಡವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡದೆ ಸತಾಯಿಸಿದ್ದರು. ಬಳಿಕ ಪುರಸಭೆ ಮುಖ್ಯಾಧಿಕಾರಿಗಳು ವಿರಾಜಪೇಟೆ ನಗರ ಪೋಲೀಸ್ ಠಾಣೆಗೆ ದೂರು ನೀಡಿ ಸ್ಥಳದ ಮಾಲೀಕರನ್ನು ಪತ್ತೆಹಚ್ಚಿ ಅವರನ್ನು ಕಾಮಗಾರಿ ನಡೆಸಿದ ಸ್ಥಳಕ್ಕೆ ಕರೆಯಿಸಲಾಯಿತು ಎಂದು ತಿಳಿಸಿದರು.
ತಡೆಗೋಡೆ ಕುಸಿತಗೊಂಡಿರುವ ವಿಚಾರವನ್ನು ಅವರ ಗಮನಕ್ಕೆ ತಂದ ಬಳಿಕ ಅವರು ತಡೆಗೋಡೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸರಿಪಡಿಸಿಕೊಡುವ ಬಗ್ಗೆ ಒಪ್ಪರುವುದಾಗಿ ಮತ್ತು ವಿರಾಜಪೇಟೆ ಠಾಣೆಯಲ್ಲಿ ಬರೆದುಕೊಟ್ಟಿರುವುದಾಗಿ ತಿಳಿಸಿದರು. ಈ ಅಕ್ರಮ ಕಾಮಗಾರಿಯ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಲಿಖಿತವಾಗಿ ಮಾಹಿತಿ ನೀಡಲಾಗಿದೆ. ಅವರು ಕೂಡ ಪರಿಶೀಲನೆ ನಡೆಸಿದ್ದರು.
ಇಷ್ಟೆಲ್ಲ ಬೆಳವಣಿಗೆ ಆಗುವುದು ತಡವಾದ್ದರಿಂದ ಸಂತ್ರಸ್ತ ಶಾಲಿನಿ ಅವರಿಗೆ ಪರಿಹಾರ ಒದಗಿಸುವುದು ತಡವಾಗಿದೆ. ನಿಜವಾದ ಜಾಗದ ಮಾಲೀಕರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಶಾಲಿನಿ ಅವರ ಮನೆಗೂ ಭೇಟಿ ನೀಡಿ ಇದಕ್ಕೆ ಪರಿಹಾರ ಒದಗಿಸುವ ಭರವಸೆಯನ್ನು ನಾವು ನೀಡಿದ್ದೇವು. ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
