ಕೈ ಕೊಟ್ಟ Gpay: ₹18 ಟಿಕೆಟ್ ಹಣಕ್ಕೆ ಮಾನವೀಯತೆ ಮರೆತು ನಡುರಾತ್ರಿ ಮಹಿಳೆಯನ್ನು ಬಸ್‌ನಿಂದ ಇಳಿಸಿದ KSRTC ಕಂಡಕ್ಟರ್!

Dec 31, 2025 - 01:01
 0  1.9k
ಕೈ ಕೊಟ್ಟ Gpay: ₹18 ಟಿಕೆಟ್ ಹಣಕ್ಕೆ ಮಾನವೀಯತೆ ಮರೆತು ನಡುರಾತ್ರಿ ಮಹಿಳೆಯನ್ನು ಬಸ್‌ನಿಂದ ಇಳಿಸಿದ KSRTC ಕಂಡಕ್ಟರ್!

ಕೊಚ್ಚಿ, ಡಿ.30: ₹18 ಮೊತ್ತದ ಟಿಕೆಟ್ ಹಣವನ್ನು ಗೂಗಲ್ ಪೇ ಮೂಲಕ ಪಾವತಿಸುವ ವೇಳೆ ತಾಂತ್ರಿಕ ದೋಷ ಉಂಟಾದ ಕಾರಣಕ್ಕೆ ಮಹಿಳಾ ಪ್ರಯಾಣಿಕೆಯನ್ನು ನಡುರಾತ್ರಿಯಲ್ಲಿ ಬಸ್‌ನಿಂದ ಇಳಿಸಲಾಗಿದೆ ಎಂಬ ಆರೋಪ ಕೇರಳದ ಕೆಎಸ್‌ಆರ್‌ಟಿಸಿ ವಿರುದ್ಧ ಕೇಳಿಬಂದಿದೆ. ಈ ಘಟನೆಯಿಂದ ಮಹಿಳೆ ನಿರ್ಜನ ಪ್ರದೇಶದಲ್ಲಿ ಸುಮಾರು ಎರಡೂವರೆ ಕಿಲೋಮೀಟರ್ ನಡೆದು ಮನೆ ತಲುಪಬೇಕಾಯಿತು.

ಕೇರಳದ ಕೊಟ್ಟಾಯಂವಿಲಾ ಮೂಲದ ದಿವ್ಯಾ (28) ಅವರು ಡಿಸೆಂಬರ್ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವೆಲ್ಲರದ ನಿವಾಸಿಯಾಗಿರುವ ದಿವ್ಯಾ ಕುನ್ನತುಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದಾರೆ. ಸಾಮಾನ್ಯವಾಗಿ ನೆಯ್ಯಟ್ಟಿಂಕರದಿಂದ ಕೊನೆಯ ಬಸ್‌ ನಲ್ಲಿ ಮನೆಗೆ ತೆರಳುವ ಅವರು, ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಆ ದಿನ ರಾತ್ರಿ 8.30ರ ಸುಮಾರಿಗೆ ಕೂನಂಬನೈನಿಂದ ಬಸ್ ಹತ್ತಿದ್ದರು.

ಪರ್ಸ್ ಮರೆತುಹೋಗಿದ್ದ ಕಾರಣ ಗೂಗಲ್ ಪೇ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದಾಗ ಸರ್ವರ್ ಸಮಸ್ಯೆಯಿಂದ ವಹಿವಾಟು ಪೂರ್ಣಗೊಳ್ಳಲಿಲ್ಲ. ಇದನ್ನು ಕಂಡಕ್ಟರ್‌ಗೆ ವಿವರಿಸಿ, ಮುಂದಿನ ನಿಲ್ದಾಣ ವೆಲ್ಲರದದಲ್ಲಿ ಹಣ ಹೊಂದಿಸಿ ಪಾವತಿಸುವುದಾಗಿ ತಿಳಿಸಿದರೂ, ಕಂಡಕ್ಟರ್ ಒಪ್ಪದೆ ಬಸ್‌ ನಿಂದ ಇಳಿಯುವಂತೆ ಸೂಚಿಸಿದ್ದಾನೆ ಎಂದು ದಿವ್ಯಾ ದೂರಿನಲ್ಲಿ ಹೇಳಿದ್ದಾರೆ.

ಬೀದಿ ದೀಪಗಳೂ ಇಲ್ಲದ ತೊಲಾಡಿ ಪ್ರದೇಶದಲ್ಲಿ ಇಳಿಸಲ್ಪಟ್ಟ ದಿವ್ಯಾ ಬಳಿಕ ಪತಿಗೆ ಮಾಹಿತಿ ನೀಡಿ, ಸುಮಾರು ಎರಡೂವರೆ ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ನಂತರ ಪತಿ ಸ್ಥಳಕ್ಕೆ ಆಗಮಿಸಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಘಟನೆಯ ಕುರಿತು ದಿವ್ಯಾ ಸಾರಿಗೆ ಇಲಾಖೆಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ದೂರನ್ನು ಸ್ವೀಕರಿಸಲಾಗಿದ್ದು, ಪ್ರಕರಣದ ಕುರಿತು ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗುವುದು ಎಂದು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 2
Funny Funny 1
Angry Angry 2
Sad Sad 3
Wow Wow 0