ಬಿಟ್ಟಂಗಾಲದಲ್ಲಿ ತ್ಯಾಜ್ಯ ಸುರಿಸಿದ ಲಾರಿಗೆ ಗ್ರಾಮ ಪಂಚಾಯಿತಿಯಿಂದ ₹10,000 ದಂಡ : ತ್ಯಾಜ್ಯವನ್ನು ಮತ್ತೆ ವಾಹನದಲ್ಲೇ ತುಂಬಿಕೊಂಡು ಹೋಗುವ ಶಿಕ್ಷೆ
admincoorgdaily
ಮಡಿಕೇರಿ, ಅ.16 : ಹುಣಸೂರಿನಿಂದ ಪಪ್ಪಾಯಿಯನ್ನು ಕೇರಳಕ್ಕೆ ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಲಾರಿಯು ಹಿಂತಿರುಗುವ ವೇಳೆ ಬಿಟ್ಟಂಗಾಲದ ಬಳಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಸುತ್ತಿದ್ದ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಸ್ಥಳೀಯರು ಈ ಘಟನೆ ಗಮನಿಸಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಪಂಚಾಯಿತಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಬಳಿಕ, ಸಂಬಂಧಪಟ್ಟ ವಾಹನ ಮಾಲೀಕರಿಗೆ ₹10,000 ದಂಡ ವಿಧಿಸಿ, ಸುರಿಸಿದ ತ್ಯಾಜ್ಯವನ್ನು ಮತ್ತೆ ವಾಹನದಲ್ಲೇ ತುಂಬಿಸಿ ತೆರಳುವಂತೆ ಸೂಚಿಸಲಾಯಿತು.
ಸಾರ್ವಜನಿಕರು ಗ್ರಾಮ ಪಂಚಾಯಿತಿಯ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ.
ಕೊಡಗಿನಲ್ಲಿ ಇತ್ತೀಚೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ತ್ಯಾಜ್ಯ ಸುರಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಕಠಿಣ ಕ್ರಮಗಳು ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
"ಸಾರ್ವಜನಿಕರು ಇದೇ ರೀತಿಯಾಗಿ ಎಚ್ಚರಿಕೆಯಿಂದ ನಡೆದುಕೊಂಡು ತ್ಯಾಜ್ಯ ಸುರಿಸುವವರ ಕುರಿತು ಮಾಹಿತಿ ನೀಡಿದರೆ, ಕೊಡಗು ಜಿಲ್ಲೆಯಲ್ಲಿ ಅಕ್ರಮ ತ್ಯಾಜ್ಯ ವಿಲೇವಾರಿ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ," ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.