CRIME

ವಿದ್ಯಾರ್ಥಿನಿ ಮೇಲೆ ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ ಅತಿಥಿ ಉಪನ್ಯಾಸಕನ ಬಂಧನ

admincoorgdaily

Photo credit: INDIA TODAY

ಬೆಳಗಾವಿ, ಡಿ.01: ನಗರದ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕನೇ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಎರಡು ವರ್ಷಗಳಿಂದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿದ ಆರೋಪದಡಿ ಅತಿಥಿ ಉಪನ್ಯಾಸಕ ನಾಗೇಶ್ವರ ಅವರನ್ನು ಕ್ಯಾಂಪ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅರ್ಥಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ ವಿಭಾಗಗಳಲ್ಲಿ ಅಧ್ಯಾಪಕನಾಗಿದ್ದ ನಾಗೇಶ್ವರ, ವಿದ್ಯಾರ್ಥಿನಿಯನ್ನು ಲಿವ್–ಇನ್ ಸಂಬಂಧಕ್ಕೆ ಬಲವಂತಪಡಿಸುತ್ತಿದ್ದಾನೆ ಎನ್ನಲಾಗಿದೆ. ತನ್ನೊಂದಿಗೆ ಎಲ್ಲಿಗೆ ಬಂದರೂ ಬರಬೇಕು, ಸಂಬಂಧದ ವಿಷಯ ಯಾರಿಗೂ ಹೇಳಬಾರದು ಎಂದು ಒತ್ತಾಯಿಸಿದ್ದಾನೆ. ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೂ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಣೇಶಪುರದಲ್ಲಿ ಬಾಡಿಗೆ ಮನೆ ಪಡೆದು, ವಿದ್ಯಾರ್ಥಿನಿಯನ್ನು ಅಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾನೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎರಡು ವರ್ಷಗಳಿಂದ ನಡೆದಿದ್ದ ದೌರ್ಜನ್ಯಕ್ಕೆ ಬೇಸತ್ತ ಯುವತಿ ಕೊನೆಗೂ ಪೋಷಕರಿಗೆ ವಿಷಯ ಹೇಳಿಕೊಂಡಿದ್ದಾರೆ. ನಂತರ ಕುಟುಂಬ ಸದಸ್ಯರಿಂದ ಬಂದ ದೂರು ಆಧರಿಸಿ ಪೊಲೀಸ್‌ ತನಿಖೆ ಆರಂಭಗೊಂಡಿದೆ.

ಪೊಕ್ಸೊಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯ ಮೊಬೈಲ್‌ಫೋನ್‌ ಸೇರಿದಂತೆ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.