ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಭ್ರಮದ ‘ಕಲಿಕಾ ಹಬ್ಬ

ಗುಮ್ಮನಕೊಲ್ಲಿ  ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಭ್ರಮದ ‘ಕಲಿಕಾ ಹಬ್ಬ

ಕುಶಾಲನಗರ, ಜ.20: ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಹಬ್ಬವು ಸಂತಸದ ಕಲಿಕೆ ಮತ್ತು ಸಂಭ್ರಮದ‌ ಕಲಿಕಾ ಹಬ್ಬ ಆಗಲಿ. ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗೆ ಕಲಿಕಾ ಹಬ್ಬವು ಪೂರಕವಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಹೇಳಿದರು.

 ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು , ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಕುಶಾಲನಗರ ಕ್ಲಸ್ಟರ್ ನ ಸಂಯುಕ್ತಾಶ್ರಯದಲ್ಲಿ ಮುಳ್ಳುಸೋಗೆ ಬಳಿಯ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ( ಜನವರಿ 20 ರಂದು ) 1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ಮೂಲಭೂತ - ಸಾಕ್ಷರತೆ- ಸಂಖ್ಯಾಶಾಸ್ತ್ರ (ಎಫ್ ಎಲ್ ಎನ್ ) ಸಂಬಂಧಿಸಿದಂತೆ ಏರ್ಪಡಿಸಿದ್ದ ಮಕ್ಕಳ ಕಲಿಕಾ ಹಬ್ಬ: 2026 ಸಂಭ್ರಮದ ಉತ್ಸವದಲ್ಲಿ ಕಲಿಕಾ ಗೋಪುರದಲ್ಲಿ ಮಕ್ಕಳ ಕಲಿಕಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

 ಕಲಿಕಾ ಹಬ್ಬವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಂತಸದಾಯಕ ಕಲಿಕೆಗೆ ಮಕ್ಕಳ ಹಬ್ಬವು ಸಹಕಾರಿಯಾಗಿದೆ. ಇದರಿಂದ ಮಕ್ಕಳಿನ ಕಲಿವಿನ ಫಲ ವೃದ್ಧಿಯಾಗುತ್ತದೆ ಎಂದು ಬಿಇಓ ಕೃಷ್ಣಪ್ಪ ಹೇಳಿದರು.

 ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ , ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿರುವ ಮಕ್ಕಳ ಕಲಿಕಾ ಹಬ್ಬವು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಉತ್ತಮ ವೇದಿಕೆ ಒದಗಿಸುತ್ತವೆ..ಮಕ್ಕಳು ಕೇಳುವ ಪ್ರಶ್ನೆಯು ಪ್ರಜ್ಞೆಯಾಗಲಿ” ಎಂದರು.

ಕಲಿಕಾ ಹಬ್ಬದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ‌ ಸಿ.ಆರ್.ಪಿ., ಟಿ.ಈ. ವಿಶ್ವನಾಥ್, ವಿದ್ಯಾರ್ಥಿಗಳು ತಾವು ಕಲಿತ ಪಾಠಗಳನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತಿದ್ದು, ಇದು ಸಂತಸದ ಕಲಿಕೆಗೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಈ ಶೈಕ್ಷಣಿಕ ವರ್ಷದ ಫೆಬ್ರವರಿಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ(Foundation literacy and Numeracy) ಚಟುವಟಿಕೆಗಳ ಬಲವರ್ಧನೆಗೆ “ಕಲಿಕಾ ಹಬ್ಬ ” ನಡೆಸಲಾಗುತ್ತಿದೆ ಎಂದರು.

ಕಲಿಕಾ ಹಬ್ಬದ ವ್ಯವಸ್ಥೆ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಚ್.ಸಾಕಮ್ಮ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದರು. ನಿವೃತ್ತ ಶಿಕ್ಷಕಿ ಬಿ.ರಾಧಮ್ಮ ಮಾತನಾಡಿದರು.

 ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಜಿಲ್ಲಾ ಶಿಕ್ಷಣ ಇಲಾಖೆಯ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಆರ್.ಶಿವಲಿಂಗ, ವಿವಿಧ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಾದ ಎಸ್.ಕೆ.ಜಲಜಾಕ್ಷಿ, ಲಕ್ಷ್ಮಿ, ಶಾಲಾ ಶಿಕ್ಷಕರಾದ ಎನ್.ಎನ್.ಭಾರತಿ, ಟಿ.ಕೆ.ವನಜಾಕ್ಷಿ, ಕೆ.ಎ.ತಾರಾ, ಬಿ.ಇ.ಅಜಿತ್ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷೆ ಬಿ.ಜಿ.ರಮ್ಯ ಸದಸ್ಯರಾದ ರೀಟಾ, ಸಲ್ಮಾ, ಗೀತಾಂಜಲಿ, ಶೋಭಾ, , ಸಂಧ್ಯಾ ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಕಥೆ ಹೇಳುವುದು. ಜ್ಞಾಪಕ ಪರೀಕ್ಷೆ, ಪೋಷಕಾಂಶ ರಂಗೋಲಿ ರಚನೆ, ಬರವಣಿಗೆ, ಸಂತಸದ ಗಣಿತ ಲೆಕ್ಕಾಚಾರ, ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಪೋಷಕರ ಮತ್ತು ಮಕ್ಕಳ ಸಹ ಸಂಬಂದಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳನ್ನು ನಡೆಸಲಾಯಿತು.

 ಕಲಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಪುರಸ್ಕರಿಸಲಾಯಿತು.

 ಮಕ್ಕಳಿಂದ ವಿವಿಧ ಕಲಿಕಾ ಪ್ರದರ್ಶನ; ಕುಶಾಲನಗರ ಕ್ಲಸ್ಟರ್ ವ್ಯಾಪ್ತಿಯಿಂದ‌ ಆಗಮಿಸಿದ್ದ ವಿವಿಧ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಂದ ಶಿಕ್ಷಕರ ಜತೆ ಆಗಮಿಸಿದ್ದ ಮಕ್ಕಳು ತಾವು ಕಲಿತ್ತಿದ್ದ ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಹೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಲಿಕಾ ಹಬ್ಬದಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಕಾಗದದ ಟೋಪಿ ಧರಿಸಿ ಗಮನ ಸೆಳೆದರು.

 “ಪ್ರಶ್ನೆಯು ಪ್ರಜ್ಞೆಯಾಗಲಿ” ಎಂಬ ಆಶಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ 1 ರಿಂದ 5 ನೇ ತರಗತಿಯ ಮಕ್ಕಳು ಭಾಗವಹಿಸಿದ್ದರು. ಶಾಲಾ ಅಂಗಳದಲ್ಲಿ ಇಡಲಾಗಿದ್ದ ಸೆಲ್ಪಿ ಕಾರ್ನರ್ ನಲ್ಲಿ ಮಕ್ಕಳು ಮತ್ತು ಪೋಷಕರು‌ ಮುಗಿಬಿದ್ದು ತಮ್ಮ ಛಾಯಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದುದು ಗೋಚರಿಸಿತು.

 ಶಾಲಾ ಶಿಕ್ಷಣ ಇಲಾಖೆ ಕ್ಲಸ್ಟರ್ ಮಟ್ಟದಲ್ಲಿ ಎಫ್.ಎಲ್.ಎನ್. ಕಲಿಕಾ ಹಬ್ಬವನ್ನು ಕ್ರಿಯಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಒಂದರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಆಯ್ದ ಮಕ್ಕಳಿಗೆ ಈ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಸಿ ಆರ್ ಪಿ ಟಿ.ಈ.ವಿಶ್ವನಾಥ್ ತಿಳಿಸಿದರು. +