ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಭಕ್ತಿಭಾವದಿಂದ ಗುರುಪೂರ್ಣಿಮೆ ಆಚರಣೆ ಮತ್ತು ಆಧ್ಯಾತ್ಮಿಕ ಶಿಬಿರ
ಪೊನ್ನಂಪೇಟೆ, ಜು.29: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಬುಧವಾರ ಶ್ರೀ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಆಧ್ಯಾತ್ಮಿಕ ಶಿಬಿರ ನೆರವೇರಿತು. ಬೆಳಿಗ್ಗೆ ಮಂಗಳಾರತಿ, ವೇದಘೋಷ ಹಾಗೂ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಶ್ರೀ ರಾಮಕೃಷ್ಣ ಪೂಜೆ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಬಾಳೆಲೆ ಕಾವೇರಿ ಕಲಾಸಮಿತಿಯಿಂದ ಭಜನೆ, ಆಧ್ಯಾತ್ಮಿಕ ಪ್ರವಚನ ಹಾಗೂ ವಿಶೇಷ ದೀಪಪೂಜೆ ನೆರವೇರಿತು. ಮಧ್ಯಾಹ್ನ ಆರತಿ, ಪ್ರಸಾದ ವಿತರಣೆ ಹಾಗೂ ಸ್ವಾಮಿ ವಿವೇಕಾನಂದರ ಜೀವನಾಧಾರಿತ ರಂಗಪುತ್ತಳಿ ಬೊಂಬೆಯಾಟ ಕಲಾವಿದರು ನಡೆಸಿಕೊಟ್ಟ "ಸೂತ್ರ ಮತ್ತು ಸಲಾಕೆ" ಗೊಂಬೆ ಆಟ (ಪಪೆಟ್ ಶೋ) ಪ್ರದರ್ಶನ ನಡೆಯಿತು. ಸಂಜೆ ಡಾ. ಶಿವಪ್ಪ ಕೆ.ಕೆ. ಮತ್ತು ತಂಡದಿಂದ ವಿಶೇಷ ಭಜನಾ ಕಾರ್ಯಕ್ರಮ ಜರುಗಿದ ಬಳಿಕ ಆರತಿಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಅವರು ಆಧ್ಯಾತ್ಮಿಕ ಪ್ರವಚನ ನೀಡಿ, ಸ್ವಾಮಿ ವಿವೇಕಾನಂದರ ಆದರ್ಶಗಳು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಕವಾಗಿವೆ ಎಂದು ಹೇಳಿದರು. ಭಾರತದ ಆಧ್ಯಾತ್ಮಿಕ ಪರಂಪರೆ, ಸನ್ನ್ಯಾಸಿಗಳ ತ್ಯಾಗಮಯ ಜೀವನ, ಸೇವಾ ಮನೋಭಾವ ಹಾಗೂ ಆತ್ಮಸಾಧನೆಯ ಮಹತ್ವವನ್ನು ಅವರು ವಿವರಿಸಿದರು.
ಚಿತ್ರಗಳು ಮತ್ತು ಪ್ರತಿಮೆಗಳು ಜಡ ವಸ್ತುಗಳಾಗಿದ್ದರೂ, ಅವು ಪ್ರತಿನಿಧಿಸುವ ಮಹನೀಯರು, ಆದರ್ಶಗಳು ಹಾಗೂ ಸಂಸ್ಕೃತಿಯ ಮೌಲ್ಯಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು. ಸಮಾಜದಲ್ಲಿ ಸಂಸ್ಕಾರ, ನೈತಿಕತೆ ಮತ್ತು ಪರಸ್ಪರ ಗೌರವದ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಕರೆ ನೀಡಿದರು. 'ಯತ್ಭಾವಂ ತತ್ಭವತಿ' ಎಂಬ ತತ್ವವನ್ನು ಉಲ್ಲೇಖಿಸಿದ ಅವರು, ವ್ಯಕ್ತಿಯ ಭಾವನೆ ಮತ್ತು ನಂಬಿಕೆಗಳು ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆ ಪ್ರಮುಖ ಪಾತ್ರವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದ ಸ್ವಾಮಿ ಪರಹಿತಾನಂದಜಿ, ಆಶ್ರಮದ ಅಭಿವೃದ್ಧಿಗೆ ನಗದು ಹಾಗೂ ವಸ್ತುರೂಪದ ದೇಣಿಗೆಗಳನ್ನು ಸ್ವಾಗತಿಸಲಾಗುತ್ತಿದ್ದು, ಆದಾಯ ತೆರಿಗೆ ಕಾಯ್ದೆಯ 80G ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವೂ ಲಭ್ಯವಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಆಶ್ರಮದ ಭಕ್ತರು, ಸಾರ್ವಜನಿಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
