ಹಾಸನ: ಸರ್ಕಾರಿ ಆಸ್ಪತ್ರೆಯಿಂದ ಸ್ಕ್ಯಾನಿಂಗ್ ಯಂತ್ರವನ್ನೇ ಕದ್ದ ಕಳ್ಳರು
admincoorgdaily

ಹಾಸನ, ಡಿ.21: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಗಂಭೀರ ಅಕ್ರಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರವನ್ನು ಕಳವು ಮಾಡಲಾಗಿದ್ದು, ಆಕ್ಸಿಜನ್ ಸಿಲಿಂಡರ್ ಗಳು ಹಾಗೂ ಐಸಿಯು ಮಾನಿಟರ್‌ಗಳು ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳೂ ನಾಪತ್ತೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕದ್ದೊಯ್ಯಲಾದ ಸ್ಕ್ಯಾನಿಂಗ್ ಯಂತ್ರವನ್ನು ಭ್ರೂಣ ಲಿಂಗ ಪತ್ತೆಗೆ ಬಳಸಿರಬಹುದೆಂಬ ಗಂಭೀರ ಶಂಕೆಯೂ ವ್ಯಕ್ತವಾಗಿದೆ.
ವರ್ಷಗಳ ಹಿಂದೆ ಆಸ್ಪತ್ರೆಗೆ ಒದಗಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರವು ತಜ್ಞರ ಕೊರತೆಯಿಂದ ಬಳಕೆಯಲ್ಲಿರಲಿಲ್ಲ. ಇತ್ತೀಚೆಗೆ ಹೊರಗುತ್ತಿಗೆ ಆಧಾರದಲ್ಲಿ ರೇಡಿಯಾಲಜಿಸ್ಟ್ ನೇಮಕಗೊಂಡ ಬಳಿಕ ಯಂತ್ರ ಪರಿಶೀಲನೆಗೆ ಮುಂದಾದಾಗ ಅದು ಆಸ್ಪತ್ರೆಯಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಡಿ–ಗ್ರೂಪ್ ನೌಕರ ಪ್ರದೀಪ್ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಸೂಫಿಯಾನ್ ಯಂತ್ರವನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿದೆ.
ಪೊಲೀಸರ ವಿಚಾರಣೆಯಲ್ಲಿ ಕಳವುಗೈದ ಯಂತ್ರವನ್ನು ಮನೆಯಲ್ಲಿಟ್ಟಿದ್ದಾಗಿ ಸಿಬ್ಬಂದಿಯೊಬ್ಬರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಭ್ರೂಣ ಲಿಂಗ ಪತ್ತೆಗೆ ಉಪಕರಣ ಬಳಸಿರುವ ಶಂಕೆ ಹಿನ್ನೆಲೆಯಲ್ಲಿ ಪಿಸಿಪಿಎನ್‌ಡಿಟಿ ಕಾಯ್ದೆಯಡಿ ರಚಿಸಲಾದ ತಜ್ಞರ ತಂಡ ಯಂತ್ರವನ್ನು ಪರಿಶೀಲನೆಗೆ ಒಳಪಡಿಸಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಅವರು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳ ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ.