ಸಿಸಿಬಿ ವಶದಲ್ಲಿದ್ದ ಸೈಬರ್​ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ಹಣ ಕದ್ದ ಹೆಡ್ ಕಾನ್ಸ್‌ಟೇಬಲ್; ಸಿಸಿಟಿವಿಯಲ್ಲಿ ಕೃತ್ಯ ಬಯಲು!

Dec 4, 2025 - 22:07
 0  580
ಸಿಸಿಬಿ ವಶದಲ್ಲಿದ್ದ ಸೈಬರ್​ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ಹಣ ಕದ್ದ ಹೆಡ್ ಕಾನ್ಸ್‌ಟೇಬಲ್; ಸಿಸಿಟಿವಿಯಲ್ಲಿ ಕೃತ್ಯ ಬಯಲು!

ಬೆಂಗಳೂರು: ಸೈಬರ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ವ್ಯಕ್ತಿಯನ್ನು ವಿಚಾರಣೆಗೆಂದು ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಕರೆತಂದ ಸಂದರ್ಭ, ಆರೋಪಿ ಕಾರಿನಲ್ಲಿದ್ದ 11 ಲಕ್ಷ ರೂ. ನಗದನ್ನು ಹೆಡ್ ಕಾನ್ಸ್‌ಟೇಬಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಸಂಪೂರ್ಣ ಕೃತ್ಯ ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಪೊಲೀಸರು ಆಘಾತ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸೈಬರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆಯ ನಿಮಿತ್ತ ಆರೋಪಿ ಮತ್ತು ಆತನ ಕಾರನ್ನು ಆಯುಕ್ತರ ಕಚೇರಿಗೆ ಕರೆತರಲಾಗಿತ್ತು. ಕಾರಿನಲ್ಲಿದ್ದ ಲಕ್ಷಾಂತರ ನಗದನ್ನು ಹೆಡ್ ಕಾನ್ಸ್‌ಟೇಬಲ್ ಜಬಿವುಲ್ಲಾ ಕಳವು ಮಾಡಿರುವುದು ನಂತರ ಬಹಿರಂಗವಾಯಿತು.

ಜಾಮೀನು ಪಡೆದು ಹೊರಬಂದ ಆರೋಪಿ ಹಣದ ಬ್ಯಾಗ್ ನಾಪತ್ತೆಯಾಗಿರುವ ಬಗ್ಗೆ ಪ್ರಶ್ನಿಸಿದಾಗ ಸಿಸಿಬಿ ಅಧಿಕಾರಿಗಳು ತಕ್ಷಣ ಸಿಸಿಟಿವಿ ಪರಿಶೀಲಿಸಿದರು. ಅಲ್ಲಿ ಜಬಿವುಲ್ಲಾ ಹಣದ ಬ್ಯಾಗ್‌ನ್ನು ಎತ್ತಿಕೊಂಡು ತೆರಳುತ್ತಿರುವುದು ಸ್ಪಷ್ಟವಾಗಿ ಕಾಣಿಸಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು.

ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರ ನೇತೃತ್ವದಲ್ಲಿ ಜಬಿವುಲ್ಲಾ ಮನೆಗೆ ದಳ ದಾಳಿ ನಡೆಸಿ ಶೋಧ ನಡೆಸಿತು. ಈ ವೇಳೆ ಜಬಿವುಲ್ಲಾ ಅಧಿಕಾರಿಗಳ ಮುಂದೆ ನಾಟಕವಾಡಿದರೂ, ಮನೆಯ ಸರ್ಚ್ ವೇಳೆ ಬೆಡ್ ಕೆಳಗೆ ಬಚ್ಚಿಟ್ಟ ಎರಡು ಲಕ್ಷ ರೂ. ಪತ್ತೆಯಾಯಿತು. ಉಳಿದ ಹಣದಿಂದ ಜಬಿವುಲ್ಲಾ ತನ್ನ ಹೆಂಡತಿಗೆ ಆಭರಣ ಮಾಡಿಸಿದ್ದಾನೆಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಾಥಮಿಕವಾಗಿ ಎರಡು ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಉಳಿದ ಮೊತ್ತವನ್ನೂ ತಕ್ಷಣ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಪ್ರಕರಣದ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 2
Wow Wow 0